ನವದೆಹಲಿ: "ಭಾರತೀಯ ಭೂಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ" ಎಂಬ ಹೇಳಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡ ಬಳಿಕ, ಕಾಂಗ್ರೆಸ್ ಸೋಮವಾರ ಈ ವಿಷಯದ ಬಗ್ಗೆ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
2020ರ ಗಾಲ್ವಾನ್ ಘಟನೆಯ ನಂತರ ಪ್ರತಿಯೊಬ್ಬ ದೇಶಭಕ್ತ ಭಾರತೀಯನು ಚೀನಾದ ಬಗ್ಗೆ ಉತ್ತರ ಕೇಳುತ್ತಿದ್ದಾನೆ. ಆದರೆ ಮೋದಿ ಸರ್ಕಾರವು "DDLJ - ನಿರಾಕರಿಸು, ಗಮನವನ್ನು ಬೇರೆಡೆ ಸೆಳೆಯುವುದು, ಸುಳ್ಳು ಹೇಳುವುದು ಮತ್ತು ಸಮರ್ಥಿಸಿಕೊಳ್ಳುವುದು" ಎಂಬ ತನ್ನ ನೀತಿಯೊಂದಿಗೆ ಸತ್ಯವನ್ನು ಮರೆಮಾಚುತ್ತಿದೆ ಎಂದು ಕಾಂಗ್ರೆಸ್ ಕಿಡಿ ಕಾರಿದೆ.
ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಆಗಸ್ಟೀನ್ ಜಾರ್ಜ್ ಮಸಿಹ್ ನೇತೃತ್ವದ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ, ಚೀನಾ, ಭಾರತದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದೆ ಎಂದು ನಿಮಗೆ ಹೇಗೆ ಗೊತ್ತು? ಎಂದು ಪ್ರಶ್ನಿಸಿದೆ. ಅಲ್ಲದೆ ನೀವು ನಿಜವಾದ ಭಾರತೀಯರಾಗಿದ್ದರೆ ಇದನ್ನು ಸಂಸತ್ತಿನಲ್ಲಿ ಪ್ರಶ್ನಿಸಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡಿತ್ತು.
ಆದಾಗ್ಯೂ, ಸುಪ್ರೀಂ ಕೋರ್ಟ್ ಮಾನನಷ್ಟ ಪ್ರಕರಣದಲ್ಲಿ ಮುಂದಿನ ವಿಚಾರಣೆಗೆ ತಡೆಯಾಜ್ಞೆ ನೀಡುವ ಮೂಲಕ ರಾಹುಲ್ ಗಾಂಧಿಯವರಿಗೆ ರಿಲೀಪ್ ನೀಡಿದೆ ಮತ್ತು ಮೂರು ವಾರಗಳ ನಂತರ ಪ್ರಕರಣದ ವಿಚಾರಣೆ ನಿಗದಿಪಡಿಸಿದೆ.
ಏತನ್ಮಧ್ಯೆ, 1962 ರಿಂದ ಭಾರತ ಎದುರಿಸಿದ ಅತಿದೊಡ್ಡ ಪ್ರಾದೇಶಿಕ ಹಿನ್ನಡೆಗೆ ಮೋದಿ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ತನ್ನ ಟೀಕೆಯನ್ನು ಮುಂದುವರೆಸಿದೆ. ಸಹಕಾರ ತೋರಿಸದ ಚೀನಾದ ಜೊತೆ ಬಾಂದವ್ಯಕ್ಕೆ ಸರಕಾರ ಯತ್ನಿಸುತ್ತಿದ್ದು, ಇದು ಧೈರ್ಯ ಹೀನತೆ ಮತ್ತು ತಪ್ಪಾದ ಆರ್ಥಿಕತೆಯ ಫಲ ಎಂದು ಆರೋಪಿಸಿದೆ.
ಜೂನ್ 15, 2020 ರಂದು ಗಾಲ್ವಾನ್‌ನಲ್ಲಿ 20 ವೀರ ಸೈನಿಕರು ಹುತಾತ್ಮರಾದಾಗಿನಿಂದ, ಪ್ರತಿಯೊಬ್ಬ ದೇಶಭಕ್ತ ಭಾರತೀಯನು ಪ್ರಧಾನಿ ಮೋದಿಯಿಂದ ಉತ್ತರ ಕೇಳುತ್ತಿದ್ದಾನೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಆದರೆ ಉತ್ತರಗಳನ್ನು ನೀಡುವ ಬದಲು, ಕಳೆದ ಐದು ವರ್ಷಗಳಿಂದ ಮೋದಿ ಸರ್ಕಾರ ನಿರಾಕರಿಸು, ಗಮನ ಬೇರೆಡೆ ಸೆಳೆಯುವುದು, ಸುಳ್ಳು ಹೇಳುವುದು ಮತ್ತು ಸಮರ್ಥಿಸುʼಎಂಬ ನೀತಿಯನ್ನು ಸತ್ಯವನ್ನು ಮರೆಮಾಡಲು ಆಯ್ಕೆ ಮಾಡಿಕೊಂಡಿದೆ" ಎಂದು ಹೇಳಿದರು.