ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತಿತರ ವಿಚಾರಗಳ ಕುರಿತ ಚರ್ಚೆಗೆ ವಿರೋಧ ಪಕ್ಷಗಳು ಬಿಗಿಪಟ್ಟು ಹಿಡಿದ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೂ ಮುಂದೂಡಲಾಯಿತು.
ಇಂದು ಬೆಳಗ್ಗೆ ಲೋಕಸಭೆ ಸಮಾವೇಶಗೊಳ್ಳುತ್ತಿದ್ದಂತೆಯೇ ಕಾಂಗ್ರೆಸ್ ಸಂಸದ ಮಾಣಿಕಂ ಟ್ಯಾಗೋರ್, ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೂ ಮುನ್ನ ಭಾರತೀಯ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಚರ್ಚಿಸಲು ನಿರ್ಣಯ ಮಂಡಿಸಿದರು.
ಬಳಿಕ ಮಾತನಾಡಿದ ಟ್ಯಾಗೋರ್, SIR ದುರ್ಬಲ ಸಮುದಾಯಗಳ ಮೇಲೆ "ಅಸಮಾನವಾಗಿ ಪರಿಣಾಮ ಬೀರಿದೆ. ಇದೇ ರೀತಿಯ "ಉದ್ದೇಶಿತ ಮತದಾನದ ಹಕ್ಕು ನಿರಾಕರಣೆ ಶೀಘ್ರದಲ್ಲೇ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಂತಹ ಇತರ ರಾಜ್ಯಗಳಿಗೆ ಹರಡಬಹುದು ಎಂದು ಎಚ್ಚರಿಸಿದರು. ಈ ವಿಚಾರದಲ್ಲಿ ಚರ್ಚೆಗೆ ಪ್ರತಿಪಕ್ಷಗಳು ಗದ್ದಲ ಎಬ್ಬಿಸಿದ ಹಿನ್ನೆಲೆಯಲ್ಲಿ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೂ ಮುಂದೂಡಲಾಯಿತು.
ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ರಾಷ್ಟ್ರೀಯ ಕ್ರೀಡೆಗಳ ನಿಯಂತ್ರಣ ಮಸೂದೆ ಮತ್ತು ರಾಷ್ಟ್ರೀಯ ಉದ್ದೀಪನ ಮದ್ದು ನಿಷೇಧ ತಿದ್ದುಪಡಿ ಮಸೂದೆಗಳನ್ನು ಕೇಂದ್ರ ಸರ್ಕಾರ ಇಂದು ಮಂಡಿಸುವ ಸಾಧ್ಯತೆಯಿದೆ.
ಈ ಮಧ್ಯೆ ಹಾಲಿ ಸಂಸದ ಶಿಬು ಸೊರೇನ್ ನಿಧನದ ಹಿನ್ನೆಲೆಯಲ್ಲಿ ಗೌರವ ಸೂಚಕವಾಗಿ ರಾಜ್ಯಸಭೆ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.