ನವದೆಹಲಿ: ಭಾರತ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವುದನ್ನು ಅಮೆರಿಕ ಟೀಕಿಸುತ್ತಿರುವುದಕ್ಕೆ ಭಾರತೀಯ ಸೇನೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.
ಅಮೆರಿಕದಿಂದ ಹೆಚ್ಚುತ್ತಿರುವ ಟೀಕೆಗಳ ಹಿನ್ನೆಲೆಯಲ್ಲಿ, ಪ್ರತಿಕ್ರಿಯೆ ನೀಡಿರುವ ಭಾರತೀಯ ಸೇನೆ ಮಂಗಳವಾರ ಆಗಸ್ಟ್ 1971 ರ ಸುದ್ದಿ ಕ್ಲಿಪ್ ನ್ನು ಪೋಸ್ಟ್ ಮಾಡಿದ್ದು, "ಇದು "1954 ರಿಂದ" ಪಾಕಿಸ್ತಾನವನ್ನು ಶಸ್ತ್ರಸಜ್ಜಿತಗೊಳಿಸುವಲ್ಲಿ ಅಮೆರಿಕ ವಹಿಸಿದ ಪಾತ್ರವನ್ನು ಎತ್ತಿ ತೋರಿಸುತ್ತದೆ" ಎಂದು ಹೇಳಿದೆ.
ಈ ಸುದ್ದಿ ಕ್ಲಿಪ್ ನ್ನು ಪೂರ್ವ ಕಮಾಂಡ್ X ನಲ್ಲಿ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗಿದೆ. "1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯದ ಯುಎಸ್ ಶಸ್ತ್ರಾಸ್ತ್ರಗಳನ್ನು ರವಾನಿಸಲಾಗಿದೆ" ಎಂದು ಭಾರತೀಯ ಸೇನೆ ಹೇಳಿದೆ.
ಬಾಂಗ್ಲಾದೇಶದ ರಚನೆಗೆ ಕಾರಣವಾದ 1971 ರ ಇಂಡೋ-ಪಾಕ್ ಯುದ್ಧಕ್ಕೆ ಕೆಲವು ತಿಂಗಳುಗಳ ಮೊದಲು ಪ್ರಕಟವಾದ ಸುದ್ದಿ, ಹಿಂದಿನ ಎರಡು ದಶಕಗಳಲ್ಲಿ ಪಾಕಿಸ್ತಾನವನ್ನು ಶಸ್ತ್ರಸಜ್ಜಿತಗೊಳಿಸುವಲ್ಲಿ ಅಮೆರಿಕ ವಹಿಸಿದ ಪಾತ್ರದ ಬಗ್ಗೆ ಮಾತನಾಡುತ್ತದೆ.
"1954 ರಿಂದ ಪಾಕಿಸ್ತಾನಕ್ಕೆ 2 ಬಿಲಿಯನ್ ಡಾಲರ್ ಮೌಲ್ಯದ ಯುಎಸ್ ಶಸ್ತ್ರಾಸ್ತ್ರಗಳನ್ನು ರವಾನಿಸಲಾಗಿದೆ" ಎಂದು ಶೀರ್ಷಿಕೆ ಹೇಳುತ್ತದೆ. ಆ ಅವಧಿಗೆ ಸರಬರಾಜು ಮಾಡಲಾದ ಶಸ್ತ್ರಾಸ್ತ್ರಗಳ ಅಂದಾಜು ಮೌಲ್ಯಮಾಪನದ ಬಗ್ಗೆ ರಾಜ್ಯಸಭೆಗೆ ತಿಳಿಸಿದ್ದ ಆಗಿನ ರಕ್ಷಣಾ ಉತ್ಪಾದನಾ ಸಚಿವ ವಿ ಸಿ ಶುಕ್ಲಾ ಅವರನ್ನು ವರದಿ ಉಲ್ಲೇಖಿಸಿದೆ.
"ರಷ್ಯಾದಿಂದ ತೈಲ ಖರೀದಿಸುವ ಮೂಲಕ ಭಾರತ ಈ ಯುದ್ಧಕ್ಕೆ ಹಣಕಾಸು ಒದಗಿಸುವುದನ್ನು ಮುಂದುವರಿಸುವುದು ಸ್ವೀಕಾರಾರ್ಹವಲ್ಲ" ಎಂದು ಅಮೆರಿಕ ಹೇಳಿತ್ತು. ಈ ಬೆನ್ನಲ್ಲೇ ಭಾರತ ಪಾಕಿಸ್ತಾನಕ್ಕೆ ಸಹಾಯ ಮಾಡಿದ್ದನ್ನು ಉಲ್ಲೇಖಿಸಿ ಅಮೆರಿಕಾಗೆ ತಿವಿದಿದೆ.
ಅಮೆರಿಕದ ಸುಂಕ ಬೆದರಿಕೆಗೆ ಪ್ರತಿಕ್ರಿಯೆ ನೀಡಿದ್ದ ಭಾರತ, ಇದು ಅಸಮರ್ಥನೀಯ ಮತ್ತು ಅಸಮಂಜಸ" ವಾದ ಹೇಳಿಕೆ ಎಂದು ಹೇಳಿತ್ತು. ರಷ್ಯಾದೊಂದಿಗಿನ ಇಂಧನ ಸಂಬಂಧಗಳಿಗಾಗಿ ವಾಷಿಂಗ್ಟನ್ ಭಾರತದಿಂದ ಸರಕುಗಳ ಮೇಲೆ ಸುಂಕವನ್ನು ಗಣನೀಯವಾಗಿ ಹೆಚ್ಚಿಸಲಿದೆ ಎಂದು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ ಕೆಲವೇ ಗಂಟೆಗಳ ನಂತರ ನವದೆಹಲಿಯ ಪ್ರತಿಕ್ರಿಯೆ ಬಂದಿದೆ.
ಟೀಕೆಗಳನ್ನು ದೃಢವಾಗಿ ತಿರಸ್ಕರಿಸಿದ ಭಾರತ, ಈ ವಿಷಯದಲ್ಲಿ ಅದನ್ನು ಗುರಿಯಾಗಿಸುವಲ್ಲಿ ದ್ವಂದ್ವ ಮಾನದಂಡಗಳನ್ನು ಎತ್ತಿ ತೋರಿಸಿದೆ. ಮತ್ತು ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟ ಎರಡೂ ರಷ್ಯಾದೊಂದಿಗೆ ತಮ್ಮ ವ್ಯಾಪಾರ ಸಂಬಂಧಗಳನ್ನು ಮುಂದುವರಿಸುತ್ತಿವೆ ಎಂದು ಹೇಳಿದೆ.