ಕೂಚ್ ಬೆಹಾರ್: ಕೂಚ್ ಬೆಹಾರ್ ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಅವರ ಬೆಂಗಾವಲು ವಾಹನದ ಮೇಲೆ ಟಿಎಂಸಿ ಕಾರ್ಯಕರ್ತರು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಟಿಎಂಸಿ ಕಾರ್ಯಕರ್ತರಿಂದ ದಾಳಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಆಡಳಿತರೂಢ ಪಕ್ಷ, ಇದು ಬಿಜೆಪಿ ಸೃಷ್ಟಿಸಿದ "ಉತ್ತಮ ನಾಟಕ" ಎಂದು ಟೀಕಿಸಿದೆ.
ಕೂಚ್ ಬೆಹಾರ್ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯ ಮುಂದೆ ಬಿಜೆಪಿ ಪ್ರತಿಭಟನೆ ಮುನ್ನಡೆಸಲು ಉತ್ತರ ಬಂಗಾಳ ಜಿಲ್ಲೆಗೆ ಆಗಮಿಸಿದ್ದ ಸುವೇಂದು ಅಧಿಕಾರಿ ವಿರುದ್ಧ ಘೋಷಣೆ ಕೂಗಲಾಗಿದ್ದು, ಖಗ್ರಾಬರಿ ಪ್ರದೇಶದ ಬಳಿ ಅವರಿಗೆ ಕಪ್ಪು ಬಾವುಟ ತೋರಿಸಲಾಯಿತು.
ಬಿಜೆಪಿ ನಾಯಕರ ಪ್ರಕಾರ, ಟಿಎಂಸಿ ಪಕ್ಷದ ಧ್ವಜಗಳು ಮತ್ತು ಕಪ್ಪು ಬಾವುಟಗಳನ್ನು ಹಿಡಿದಿದ್ದ ಗುಂಪೊಂದು ಇಂದು ಮಧ್ಯಾಹ್ನ 12.35 ರ ಸುಮಾರಿಗೆ ಸುವೇಂದು ಅಧಿಕಾರಿಯ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.
ಪ್ರತಿಭಟನಾಕಾರರು "ವಾಪಸ್ ಹೋಗಿ" ಘೋಷಣೆಗಳನ್ನು ಕೂಗಿದರು ಮತ್ತು ಸುವೇಂದು ಅಧಿಕಾರಿಯ ವಾಹನದ ಮೇಲೆ ಬೂಟುಗಳನ್ನು ಎಸೆದರು ಎಂದು ವರದಿಯಾಗಿದೆ. ಪೊಲೀಸ್ ಬೆಂಗಾವಲು ವಾಹನ ಸೇರಿದಂತೆ ಅವರ ಬೆಂಗಾವಲು ಪಡೆಯಲ್ಲಿದ್ದ ಕನಿಷ್ಠ ಒಂದು ಕಾರಿನ ಕಿಟಕಿ ಗಾಜುಗಳು ಪುಡಿಪುಡಿಯಾಗಿವೆ ಎಂದು ವರದಿಯಾಗಿದೆ.
ಬಿಜೆಪಿ ಈ ದಾಳಿಗೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅನ್ನು ದೂಷಿಸಿದ್ದು, ಇದು "ವಿರೋಧ ಪಕ್ಷದ ನಾಯಕನನ್ನು ಬೆದರಿಸಲು ಪೂರ್ವ ಯೋಜಿತ ಪ್ರಯತ್ನ" ಎಂದು ಹೇಳಿದೆ.
ಆದಾಗ್ಯೂ, ಟಿಎಂಸಿಯ ಯಾವುದೇ ಕಾರ್ಯಕರ್ತರು ಈ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗಿಲ್ಲ ಮತ್ತು ಈ ದಾಳಿ "ಬಿಜೆಪಿಯೊಳಗಿನ ಆಂತರಿಕ ಕಲಹದ ಪರಿಣಾಮ" ಎಂದು ತಿರುಗೇಟು ನೀಡಿದೆ.