ಪಾಟ್ನಾ: ಬಿಹಾರ ಮಾಜಿ ಸಚಿವ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಐದು ಸಣ್ಣ ಪಕ್ಷಗಳ ಮೈತ್ರಿಕೂಟ ರಚಿಸುವುದಾಗಿ ಮಂಗಳವಾರ ಘೋಷಿಸಿದ್ದಾರೆ.
ಲಾಲು ಪ್ರಸಾದ್ ಯಾದವ್ ಅವರು ಇತ್ತೀಚೆಗೆ ತೇಜ್ ಪ್ರತಾಪ್ ಯಾದವ್ ಅವರನ್ನು ಆರ್ ಜೆಡಿಯಿಂದ ಉಚ್ಚಾಟಿಸಿದ್ದರು.
ಇಂದು ಐದು ಪಕ್ಷಗಳ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ತೇಜ್ ಪ್ರತಾಪ್ ಯಾದವ್, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ತಾವು ಮಹುವಾ ಸ್ಥಾನದಿಂದ ಸ್ಪರ್ಧಿಸುವುದಾಗಿ ಹೇಳಿದರು.
ವಿಕಾಸ್ ವಂಚಿತ್ ಇನ್ಸಾನ್ ಪಕ್ಷ(ವಿವಿಐಪಿ), ಭೋಜ್‌ಪುರಿ ಜನ ಮೋರ್ಚಾ(ಬಿಜೆಎಂ), ಪ್ರಗತಿಶೀಲ ಜನತಾ ಪಕ್ಷ(ಪಿಜೆಪಿ), ವಾಜಿಬ್ ಅಧಿಕಾರ್ ಪಕ್ಷ(ಡಬ್ಲ್ಯೂಎಪಿ) ಮತ್ತು ಸಂಯುಕ್ತ ಕಿಸಾನ್ ವಿಕಾಸ್ ಪಕ್ಷ(ಎಸ್‌ಕೆವಿಪಿ) ಈ ಐದು ಪಕ್ಷಗಳು ಸೇರಿ ಹೊಸ ಮೈತ್ರಿಕೂಟ ರಚಿಸುತ್ತಿವೆ ಎಂದು ಲಾಲು ಪುತ್ರ ತಿಳಿಸಿದ್ದಾರೆ.
"ಜನ ನನ್ನನ್ನು ಗೇಲಿ ಮಾಡಲು ಸ್ವತಂತ್ರರು. ಆದರೆ ನಾನು ನನ್ನದೇ ಆದ ಹಾದಿಯಲ್ಲಿ ಸಾಗುತ್ತೇನೆ. ಸಾಮಾಜಿಕ ನ್ಯಾಯ, ಸಾಮಾಜಿಕ ಹಕ್ಕುಗಳು ಮತ್ತು ಬಿಹಾರದ ಸಂಪೂರ್ಣ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಮೈತ್ರಿಕೂಟ ಒಟ್ಟಾಗಿ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ.
"ಜನ ನಮಗೆ ಜನಾದೇಶ ನೀಡಿದರೆ, ನಾವು ರಾಜ್ಯದ ಅಭಿವೃದ್ಧಿಯತ್ತ ಕೆಲಸ ಮಾಡುತ್ತೇವೆ. ರಾಮ್ ಮನೋಹರ್ ಲೋಹಿಯಾ, ಕರ್ಪೂರಿ ಠಾಕೂರ್ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಕನಸುಗಳನ್ನು ನನಸಾಗಿಸಲು ನಾವು ಕೆಲಸ ಮಾಡುತ್ತೇವೆ" ಎಂದು ತೇಜ್ ಪ್ರತಾಪ್ ಯಾದವ್ ಭರವಸೆ ನೀಡಿದರು.