ಮುಂಬೈ: ಕೊಲ್ಲಾಪುರದ ನಾಂದಣಿ ಮಠದಿಂದ ಮಾದೇವಿ (ಮಾಧುರಿ) ಆನೆಯನ್ನು ಅನಂತ್ ಅಂಬಾನಿ ನಿರ್ವಹಿಸುತ್ತಿರುವ ಗುಜರಾತ್‌ನ ವಂತಾರ ಪ್ರಾಣಿ ರಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸುವುದಕ್ಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಜೈನ ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ನಂದನಿಯಲ್ಲಿರುವ ಶ್ರೀ ಜಿನ್ಸೇನ್ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿ ಜೈನಮಠದಲ್ಲಿದ್ದ 36 ವರ್ಷದ ಹೆಣ್ಣು ಆನೆ ಮಾಧುರಿಯನ್ನು ನ್ಯಾಯಾಲಯದ ತೀರ್ಪಿನ ನಂತರ ಕಳೆದ ವಾರ ವಂತರಾದ ರಾಧೆ ಕೃಷ್ಣ ದೇವಾಲಯ ಆನೆ ಕಲ್ಯಾಣ ಟ್ರಸ್ಟ್‌ಗೆ ಸ್ಥಳಾಂತರಿಸಲಾಯಿತು.
ಪೆಟಾ-ಇಂಡಿಯಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಮುಂಬೈ ಹೈಕೋರ್ಟ್ ಜುಲೈ 16ರಂದು ಆನೆಯನ್ನು ವಂತಾರ ಮೃಗಾಲಯಕ್ಕೆ ಸ್ಥಳಾಂತರಿಸಲು ಸೂಚಿಸಿತ್ತು. ಅದರಂತೆ ಆನೆಯನ್ನು ಸ್ಥಳಾಂತರ ಮಾಡಲಾಗಿತ್ತು. ನಂತರ ಜುಲೈ 25ರಂದು ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶವನ್ನು ಎತ್ತಿಹಿಡಿದಿತ್ತು. ಆದರೆ, ಈ ಕ್ರಮವನ್ನು ಅನೇಕ ಜೈನರು ಖಂಡಿಸಿದ್ದಾರೆ. ಆನೆಯನ್ನು ಅನಂತ್ ಅಂಬಾನಿಯ ಖಾಸಗಿ ಉದ್ಯಮವಾಗಿರುವ ವಂತಾರ ಕೇಂದ್ರದಲ್ಲಿ ಇರಿಸುವ ಬದಲು ಮಠಕ್ಕೆ ಹಿಂತಿರುಗಿಸಬೇಕು ಅಥವಾ ಸರ್ಕಾರಿ ಮೃಗಾಯಲಕ್ಕೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಮಾಧುರಿ (ಮಹಾದೇವಿ ಎಂದೂ ಕರೆಯುತ್ತಾರೆ) ಅವರನ್ನು ವಂತಾರ ಕೇಂದ್ರದಿಂದ ಮರಳಿ ತರಬೇಕೆಂದು ಒತ್ತಾಯಿಸಿ ಕೊಲ್ಲಾಪುರದಲ್ಲಿ ಸಾವಿರಾರು ಜನರು 'ಮೌನ ಮೆರವಣಿಗೆ'ಯಲ್ಲಿ ಭಾಗವಹಿಸಿದ್ದರು. ಇದರ ಬೆನ್ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವಂದ್ರ ಫಡ್ನವೀಸ್ ದಿಢೀರ್ ಸಭೆ ನಡೆಸಿದ್ದರು. ಇಂದು ಮುಂಬೈನಲ್ಲಿ ವಂತಾರ ತಂಡದೊಂದಿಗೆ ನಾನು ವಿಸ್ತೃತ ಚರ್ಚೆ ನಡೆಸಿದೆ. 'ಮಾಧುರಿ' ಆನೆಯನ್ನು ಮಠಕ್ಕೆ ಸುಗಮವಾಗಿ ರವಾನಿಸಲು ಮಹಾರಾಷ್ಟ್ರ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಗೆ ಜೊತೆಯಾಗುವುದಾಗಿ ವಂತಾರ ಸಹ ಹೇಳಿದೆ ಎಂದು ಫಡ್ನವೀಸ್ ಹೇಳಿದರು.
ಕೊಲ್ಹಾಪುರದಲ್ಲಿ ಮಹಾರಾಷ್ಟ್ರ ಸರ್ಕಾರದ ಅರಣ್ಯ ಇಲಾಖೆ ಆಯ್ಕೆ ಮಾಡಿದ ಸ್ಥಳದಲ್ಲಿ ಆನೆಗಾಗಿ ಪುನರ್ವಸತಿ ಕೇಂದ್ರವನ್ನು ನಿರ್ಮಿಸಲು ವಂತಾರ ತಂಡವು ತನ್ನ ಇಚ್ಛೆಯನ್ನು ತೋರಿಸಿದೆ. ಸಮುದಾಯದ ಧಾರ್ಮಿಕ ಭಾವನೆಗಳಿಗೆ ಅತ್ಯುನ್ನತ ಗೌರವವನ್ನು ನೀಡುವುದಾಗಿ ತಂಡದ ಸದಸ್ಯರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಈ ವಾರದ ಆರಂಭದಲ್ಲಿ ನಂದನಿ ಮಠದ ಶ್ರೀಗಳು ಆನೆ ನಿರ್ಗಮನದ ಸಮಯದಲ್ಲಿ ಅಳುತ್ತಿರುವ ವೀಡಿಯೊಗಳು ವೈರಲ್ ಆದ ನಂತರ ಸಾರ್ವಜನಿಕ ಆಕ್ರೋಶ ತೀವ್ರಗೊಂಡಿತು. ಇದಕ್ಕೆ ಪ್ರತಿಯಾಗಿ, ಜೈನ ಸಮುದಾಯದ ಹಲವಾರು ಸದಸ್ಯರು ಅಂಬಾನಿ ನೇತೃತ್ವದ ಜಿಯೋ ಬ್ರ್ಯಾಂಡ್ ನೀಡುವ ಉತ್ಪನ್ನಗಳು ಮತ್ತು ಸೇವೆಗಳನ್ನು ಬಹಿಷ್ಕರಿಸಲು ಪ್ರಾರಂಭಿಸಿದ್ದಾರೆ. ಜನರ ಆಕ್ರೋಶ ಹೆಚ್ಚಾಗುತ್ತಿದ್ದಂತೆ ವಂತಾರ ಕೇಂದ್ರ, ನಾವು ಆನೆಯನ್ನು ಕೊಲ್ಹಾಪುರದ ಮಠದಿಂದ ಜಾಮ್ನಗರದಲ್ಲಿರುವ ತನ್ನ ಸೌಲಭ್ಯಕ್ಕೆ ಸ್ಥಳಾಂತರಿಸುವಂತೆ ಕೇಳಿರಲಿಲ್ಲ. ನ್ಯಾಯಾಲಯದ ಆದೇಶದಂತೆ ಪ್ರಕ್ರಿಯೆಗಳು ನಡೆದಿದ್ದವು ಎಂದು ಸ್ಪಷ್ಟನೆ ನೀಡಿದೆ.