ನವದೆಹಲಿ: ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, 2025 ಮತ್ತು ರಾಷ್ಟ್ರೀಯ ಡೋಪಿಂಗ್ ತಡೆ(ತಿದ್ದುಪಡಿ) ಮಸೂದೆ, 2025 ಅನ್ನು ಹೆಚ್ಚಿನ ಪರಿಶೀಲನೆಗಾಗಿ ಸಂಸತ್ತಿನ ಜಂಟಿ ಸಮಿತಿಗೆ ಉಲ್ಲೇಖಿಸುವಂತೆ ಹಲವಾರು ವಿರೋಧ ಪಕ್ಷಗಳ ನಾಯಕರು ಬುಧವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಒತ್ತಾಯಿಸಿದರು.
ಸ್ಪೀಕರ್‌ಗೆ ಬರೆದ ಜಂಟಿ ಪತ್ರದಲ್ಲಿ, ವಿರೋಧ ಪಕ್ಷದ ನಾಯಕರು ಎರಡು ಮಹತ್ವದ ಮಸೂದೆಗಳನ್ನು ಸದನದಲ್ಲಿ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಪಟ್ಟಿ ಮಾಡಲಾಗಿದೆ. ಆದರೆ ಅವುಗಳ ರಾಷ್ಟ್ರೀಯ ಪ್ರಾಮುಖ್ಯತೆಯನ್ನು ಪರಿಗಣಿಸಿ ಮಸೂದೆಗಳ ಕುರಿತು ಒಮ್ಮತದ ಅಗತ್ಯವಿದೆ. ಹೀಗಾಗಿ ಈ ಮಸೂದೆಗಳನ್ನು ಜೆಪಿಸಿಗೆ ಉಲ್ಲೇಖಿಸಬೇಕು ಎಂದು ಆಗ್ರಹಿಸಿದ್ದಾರೆ.
ಈ ಮಸೂದೆಗಳು ಭಾರತದಲ್ಲಿ ಕ್ರೀಡೆಗಳ ಆಡಳಿತ, ನಿಯಂತ್ರಣ ಮತ್ತು ನೈತಿಕ ಮೇಲ್ವಿಚಾರಣೆಯಲ್ಲಿ ವ್ಯಾಪಕ ಸುಧಾರಣೆಗಳನ್ನು ಪ್ರಸ್ತಾಪಿಸುತ್ತವೆ ಎಂದು ಪ್ರತಿಪಕ್ಷ ನಾಯಕರು ಹೇಳಿದ್ದಾರೆ.
"ನಮ್ಮ ಕ್ರೀಡಾಪಟುಗಳು, ಕ್ರೀಡಾ ಒಕ್ಕೂಟಗಳು ಮತ್ತು ಅಂತರರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಲ್ಲಿ ಭಾರತದ ಸ್ಥಾನಮಾನದ ಮೇಲೆ ಅವು ಗಂಭೀರ ಪರಿಣಾಮಗಳನ್ನು ಬೀರುತ್ತವೆ" ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
"ರಾಷ್ಟ್ರೀಯ ಪ್ರಾಮುಖ್ಯತೆ, ವಿಶಾಲವಾದ ಒಮ್ಮತದ ಅಗತ್ಯತೆ ಮತ್ತು ಸಂಬಂಧಿತರೊಂದಿಗೆ ಸಮಾಲೋಚಿಸುವ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು, ಈ ಎರಡೂ ಮಸೂದೆಗಳನ್ನು ಹೆಚ್ಚಿನ ಚರ್ಚೆಗಾಗಿ ಜಂಟಿ ಸಂಸದೀಯ ಸಮಿತಿಗೆ (ಜೆಪಿಸಿ) ಉಲ್ಲೇಖಿಸಬೇಕೆಂದು ನಾವು ಗೌರವದಿಂದ ವಿನಂತಿಸುತ್ತೇವೆ" ಎಂದು ವಿರೋಧ ಪಕ್ಷದ ನಾಯಕರು ಹೇಳಿದ್ದಾರೆ.
ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆಯು ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಮತ್ತು ಅವುಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸಲು ಪ್ರಯತ್ನಿಸುತ್ತದೆ. ಆದರೆ ರಾಷ್ಟ್ರೀಯ ಡೋಪಿಂಗ್ ತಡೆ ಮಸೂದೆಯು ಭಾರತದ ಡೋಪಿಂಗ್ ವಿರೋಧಿ ಚೌಕಟ್ಟನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.
ಕಾಂಗ್ರೆಸ್‌ನ ಕೆ.ಸಿ. ವೇಣುಗೋಪಾಲ್, ಗೌರವ್ ಗೊಗೊಯ್, ಕೆ. ಸುರೇಶ್, ಎನ್‌ಸಿಪಿ-ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ, ಟಿಎಂಸಿಯ ಕಾಕೋಲಿ ಘೋಷ್ ದಸ್ತಿಕರ್, ಡಿಎಂಕೆಯ ಕೆ. ಕನೋಮೋಜಿ, ಶಿವಸೇನೆ (ಯುಬಿಟಿ) ಅರವಿಂದ್ ಸಾವಂತ್, ಆರ್‌ಎಸ್‌ಪಿಯ ಎನ್‌ಕೆ. ಪ್ರೇಮಚಂದ್ರನ್, ವಿಸಿಕೆಯ ಡಿ. ರವಿ ಕುಮಾರ್, ಎಂಡಿಎಂಕೆಯ ದುರೈ ವೈಕೊ ಮತ್ತು ಐಯುಎಂಎಲ್‌ನ ಇ.ಟಿ. ಮೊಹಮ್ಮದ್ ಬಶೀರ್ ಅವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.