ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಆ.08) ರಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಈ ಸಂಭಾಷಣೆ ವೇಳೆ ಉಕ್ರೇನ್‌ಗೆ ಸಂಬಂಧಿಸಿದ ಇತ್ತೀಚಿನ ಬೆಳವಣಿಗೆಗಳ ಕುರಿತು ಪುಟಿನ್ ಮೋದಿಗೆ ವಿವರಿಸಿದ್ದಾರೆ.
ಅಧ್ಯಕ್ಷ ಪುಟಿನ್ ಅವರ ವಿವರವಾದ ಮೌಲ್ಯಮಾಪನಕ್ಕಾಗಿ ಧನ್ಯವಾದ ಹೇಳುತ್ತಾ, ಸಂಘರ್ಷದ ಶಾಂತಿಯುತ ಪರಿಹಾರಕ್ಕಾಗಿ ಭಾರತದ ಸ್ಥಿರ ನಿಲುವನ್ನು ಪ್ರಧಾನಿ ಪುನರುಚ್ಚರಿಸಿದ್ದಾರೆ.
"ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರೊಂದಿಗೆ ಬಹಳ ಒಳ್ಳೆಯ ಮತ್ತು ವಿವರವಾದ ಸಂಭಾಷಣೆ ನಡೆಯಿತು. ಉಕ್ರೇನ್‌ನ ಇತ್ತೀಚಿನ ಬೆಳವಣಿಗೆಗಳನ್ನು ಹಂಚಿಕೊಂಡಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಿದ್ದೇನೆ. ನಮ್ಮ ದ್ವಿಪಕ್ಷೀಯ ಕಾರ್ಯಸೂಚಿಯಲ್ಲಿನ ಪ್ರಗತಿಯನ್ನು ಸಹ ನಾವು ಪರಿಶೀಲಿಸಿದ್ದೇವೆ ಮತ್ತು ಭಾರತ-ರಷ್ಯಾ ವಿಶೇಷ ಮತ್ತು ಸವಲತ್ತು ಪಡೆದ ಕಾರ್ಯತಂತ್ರದ ಪಾಲುದಾರಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ನಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದೇವೆ.
ಈ ವರ್ಷದ ಕೊನೆಯಲ್ಲಿ ಭಾರತದಲ್ಲಿ ಅಧ್ಯಕ್ಷ ಪುಟಿನ್ ಅವರನ್ನು ಆತಿಥ್ಯ ವಹಿಸಲು ನಾನು ಎದುರು ನೋಡುತ್ತಿದ್ದೇನೆ" ಎಂದು ಮೋದಿ X ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಇದಕ್ಕೂ ಮೊದಲು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಆ.07 ರಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.