ನವದೆಹಲಿ: ಬಹುನಿರೀಕ್ಷಿತ ರಾಷ್ಟ್ರೀಯ ಕ್ರೀಡಾ ಆಡಳಿತ ಮಸೂದೆ, 2025 ಮತ್ತು ರಾಷ್ಟ್ರೀಯ ಡೋಪಿಂಗ್ ತಡೆ(ತಿದ್ದುಪಡಿ) ಮಸೂದೆ, 2025 ಅನ್ನು ಸೋಮವಾರ ಲೋಕಸಭೆಯಲ್ಲಿ ಅಂಗೀಕರಿಸಲಾಯಿತು.
ಬಿಹಾರದಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ(ಎಸ್ಐಆರ್) ವಿರುದ್ಧ ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆ ಇಂದು ಲೋಕಸಭೆಯಲ್ಲಿ ಐತಿಹಾಸಿಕ ಕ್ರೀಡಾ ಆಡಳಿತ, ಡೋಪಿಂಗ್ ತಡೆ ಮಸೂದೆ ಅಂಗೀಕರಿಸಲಾಗಿದೆ. ಇದನ್ನು "ಸ್ವಾತಂತ್ರ್ಯದ ನಂತರ ಭಾರತೀಯ ಕ್ರೀಡೆಯಲ್ಲಿನ ಏಕೈಕ ಅತಿದೊಡ್ಡ ಸುಧಾರಣೆ" ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಅವರು ಬಣ್ಣಿಸಿದರು.
ವಿರೋಧ ಪಕ್ಷದ ಪ್ರತಿಭಟನೆಗಳಿಂದಾಗಿ ಕಲಾಪ ಮುಂದೂಡಲ್ಪಟ್ಟ ನಂತರ ಮಧ್ಯಾಹ್ನ 2 ಗಂಟೆಗೆ ಲೋಕಸಭೆ ಮತ್ತೆ ಸಭೆ ಸೇರಿದಾಗ ರಾಷ್ಟ್ರೀಯ ಡೋಪಿಂಗ್ ತಡೆ(ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಯಿತು.
"ಇದು ಸ್ವಾತಂತ್ರ್ಯದ ನಂತರದ ಕ್ರೀಡೆಯಲ್ಲಿನ ಏಕೈಕ ಅತಿದೊಡ್ಡ ಸುಧಾರಣೆಯಾಗಿದೆ. ಈ ಮಸೂದೆಯು ಹೊಣೆಗಾರಿಕೆಯನ್ನು ಖಚಿತಪಡಿಸುತ್ತದೆ. ನ್ಯಾಯವನ್ನು ಖಚಿತಪಡಿಸುತ್ತದೆ, ಕ್ರೀಡಾ ಒಕ್ಕೂಟಗಳಲ್ಲಿ ಉತ್ತಮ ಆಡಳಿತವನ್ನು ಖಚಿತಪಡಿಸುತ್ತದೆ" ಎಂದು ವಿರೋಧ ಪಕ್ಷಗಳ ಸದಸ್ಯರ ಘೋಷಣೆಗಳ ನಡುವೆ ಮಾಂಡವಿಯಾ ಹೇಳಿದರು.
"ಇದು ಭಾರತದ ಕ್ರೀಡಾ ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಮಹತ್ವವನ್ನು ಹೊಂದಿರುತ್ತದೆ. ಅಂತಹ ಮಹತ್ವದ ಮಸೂದೆ ಮತ್ತು ಸುಧಾರಣೆಗೆ ವಿರೋಧ ಪಕ್ಷದ ಭಾಗವಹಿಸುವಿಕೆ ಇಲ್ಲದಿರುವುದು ದುರದೃಷ್ಟಕರ" ಎಂದು ಸಚಿವರು ಟೀಕಿಸಿದರು.
ಮಸೂದೆಗಳ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದಾಗ ವಿರೋಧ ಪಕ್ಷದ ನಾಯಕರು ಸದನದಲ್ಲಿ ಇರಲಿಲ್ಲ. ಏಕೆಂದರೆ ಅವರಲ್ಲಿ ಹೆಚ್ಚಿನವರು ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ ವಿರುದ್ಧ ಚುನಾವಣಾ ಆಯೋಗದ ಪ್ರಧಾನ ಕಚೇರಿ ಮುಂದೆ ಪ್ರತಿಭಟನೆ ನಡೆಸುವಾಗ ಬಂಧಿಸಲ್ಪಟ್ಟರು. ನಂತರ, ವಿರೋಧ ಪಕ್ಷದ ಸದಸ್ಯರು ಸದನಕ್ಕೆ ಹಿಂತಿರುಗಿ ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.
ಗದ್ದಲದ ನಡುವೆ, ಎರಡೂ ಮಸೂದೆಗಳನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು, ನಂತರ ಸದನವನ್ನು ಸಂಜೆ 4 ಗಂಟೆಯವರೆಗೆ ಮುಂದೂಡಲಾಯಿತು.