ನವದೆಹಲಿ: ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನ ಪರಮಾಣು ಬೆದರಿಕೆಗೆ ಭಾರತ ಇಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. ಪರಮಾಣು ಶಸ್ತ್ರಾಸ್ತ್ರಗಳ ಮುಂದಿಟ್ಟು ಬೆದರಿಸುವುದು ಪಾಕಿಸ್ತಾನದ ಹಳೆಯ ಅಭ್ಯಾಸ. ಆದರೆ ಭಾರತ ಪರಮಾಣು ಬ್ಲ್ಯಾಕ್‌ಮೇಲ್‌ಗೆ ಮಣಿಯುವುದಿಲ್ಲ. ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ನಮಗೆ ತಿಳಿದಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಸ್ನೇಹಪರ ಅಮೆರಿಕ ನೆಲದಲ್ಲಿ ನಿಂತು ಮಾಡಿದ ಈ ಹೇಳಿಕೆ ವಿಷಾದನೀಯ. ಅಂತಹ ಹೇಳಿಕೆಗಳು ಎಷ್ಟು ಬೇಜವಾಬ್ದಾರಿಯುತವಾಗಿವೆ ಎಂಬುದನ್ನು ಜಗತ್ತು ನೋಡಬಹುದು. ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವಾಗಿದೆಯೇ ಎಂದು ಖಚಿತವಿಲ್ಲದ ಮತ್ತು ಸೇನೆಯೇ ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದೆ ಎಂದು ನಂಬಲಾದ ದೇಶದ ಬಗ್ಗೆಯೂ ಈ ವಿಷಯಗಳು ಅನುಮಾನಗಳನ್ನು ಹುಟ್ಟುಹಾಕುತ್ತವೆ ಎಂದು ಸಚಿವಾಲಯ ಹೇಳಿದೆ.
ಭಾರತದೊಂದಿಗಿನ ಸಂಘರ್ಷದ ಬಳಿಕ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಎರಡನೇ ಬಾರಿಗೆ ಅಮೆರಿಕಾಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಫ್ಲೋರಿಡಾದ ಟ್ಯಾಂಪಾದಲ್ಲಿ ಪಾಕಿಸ್ತಾನಿ ವಲಸೆಗಾರರನ್ನು ಉದ್ದೇಶಿಸಿ ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮಾತನಾಡಿದ್ದು, ಈ ವೇಳೆ ಭಾರತಕ್ಕೆ ಗೊಡ್ಡು ಬೆದರಿಕೆ ಹಾಕಿದ್ದರು. ಟ್ಯಾಂಪಾದಲ್ಲಿ ಪಾಕಿಸ್ತಾನದ ಗೌರವ ಕಾನ್ಸುಲ್ ಆಗಿ ಸೇವೆ ಸಲ್ಲಿಸುತ್ತಿರುವ ಉದ್ಯಮಿ ಅದ್ನಾನ್ ಅಸಾದ್ ಅವರಿಗೆ ಆಯೋಜಿಸಿದ್ದ ಬ್ಲ್ಯಾಕ್-ಟೈ ಭೋಜನಕೂಟದ ಸಂದರ್ಭದಲ್ಲಿ ಮುನೀರ್, ಪರಮಾಣು ಬೆದರಿಕೆಗಳನ್ನು ಹಾಕಿದ್ದಾರೆ. ಭಾರತ-ಪಾಕ್ ಸೇರಿದಂತೆ ಸಂಘರ್ಷಕ್ಕೆ ಒಳಗಾಗಿರುವ ಜಗತ್ತಿನ ಹಲವು ದೇಶಗಳ ನಡುವೆ ಶಾಂತಿ ಸ್ಥಾಪನೆ ಮಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳುತ್ತಿರುವ ಬೆನ್ನಲ್ಲೇ ಮುನೀರ್ ಅಮೆರಿಕದ ನೆಲದಲ್ಲಿ ನಿಂತು ಭಾರತಕ್ಕೆ ಬೆದರಿಕೆ ಹಾಕಿರುವುದು ಗಮನಾರ್ಹ ಸಂಗತಿಯಾಗಿದೆ.
ನಮ್ಮದು ಪರಮಾಣು ಶಸ್ತ್ರಸಜ್ಜಿತ ದೇಶ. ನಮ್ಮ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ ಎಂದು ನಾವು ಭಾವಿಸಿದರೆ, ಅರ್ಧದಷ್ಟು ಪ್ರಪಂಚವನ್ನು ನಮ್ಮೊಂದಿಗೆ ತೆಗೆದುಕೊಳ್ಳುತ್ತೇವೆಂದು ಇಡೀ ವಿಶ್ವಕ್ಕೂ ಅಣುಬಾಂಬ್ ಪಾಕ್ ಸೇನಾ ಮುಖ್ಯಸ್ಥ ಬೆದರಿಕೆ ಹಾಕಿದ್ದಾರೆ. ಇದೇ ವೇಳೆ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದ್ದಕ್ಕಾಗಿ ಭಾರತವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಮುನೀರ್, ನದಿ ನೀರನ್ನು ತಡೆಹಿಡಿಯುವ ನಿರ್ಧಾರವು 25 ಕೋಟಿ ಜನರನ್ನು ಹಸಿವಿನಿಂದ ಬಳಲಿಸಬಹುದು. ಭಾರತ ಅಣೆಕಟ್ಟು ನಿರ್ಮಿಸುವವರೆಗೆ ಕಾಯಿರಿ, ನಂತರ 10 ಕ್ಷಿಪಣಿಗಳಿಂದ ಅದನ್ನು ನಾಶಪಡಿಸುತ್ತೇವೆ. ಸಿಂಧೂ ನದಿ ಭಾರತೀಯರ ಕುಟುಂಬದ ಆಸ್ತಿಯಲ್ಲ. ಅಲ್ಹಮ್ದುಲಿಲ್ಲಾಹ್ ಎಂದು ಉಲ್ಲೇಖಿಸಿದ್ದು ನಮ್ಮಲ್ಲಿ ಕ್ಷಿಪಣಿಗಳ ಕೊರತೆಯಿಲ್ಲ ಎಂದು ಬೆದರಿಕೆ ಹಾಕಿದ್ದರು.
ಈ ಒಪ್ಪಂದ ರದ್ದುಗೊಳಿಸಿದ ಭಾರತ
ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿಯ ಎರಡನೇ ದಿನವಾದ ಏಪ್ರಿಲ್ 24 ರಂದು ಭಾರತ ಪಾಕಿಸ್ತಾನದೊಂದಿಗಿನ 65 ವರ್ಷಗಳ ಹಳೆಯ ಸಿಂಧೂ ಜಲ ಒಪ್ಪಂದವನ್ನು ನಿಲ್ಲಿಸಿತ್ತು. ಈ ಭಯೋತ್ಪಾದಕ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು.