ಮುಂಬೈ: ಮತ ಕಳ್ಳತನ ಮತ್ತು "ವೋಟ್ ಚೋರ್ ಸರ್ಕಾರ್" ಎಂದು ಹೇಳಿದ್ದಕ್ಕಾಗಿ ಜೀವ ಬೆದರಿಕೆ ಇದೆ. ಹೀಗಾಗಿ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಬುಧವಾರ ಪುಣೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ವೀರ್ ಸಾವರ್ಕರ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಪುಣೆಯ ವಿಶೇಷ ನ್ಯಾಯಾಲಯದಲ್ಲಿ ಕಾಂಗ್ರೆಸ್ ನಾಯಕನ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಮಾರ್ಚ್ 2023 ರಲ್ಲಿ ಲಂಡನ್‌ನಲ್ಲಿ ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ವೀರ್ ಸಾವರ್ಕರ್ ಅವರನ್ನು ಟೀಕಿಸಿದ್ದರು. ಈ ಸಂಬಂಧ ರಾಹುಲ್ ಗಾಂಧಿ ವಿರುದ್ಧ ಸತ್ಯಕಿ ಸಾವರ್ಕರ್ ಅವರು ಪ್ರಕರಣ ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ರಾಹುಲ್ ಗಾಂಧಿ ಅವರು ವಕೀಲ ಮಿಲಿಂದ್ ಪವಾರ್ ಅವರು ಮೂಲಕ ಪುಣೆಯ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ, ತಮ್ಮ ಸುರಕ್ಷತೆಗೆ ಅಪಾಯವಿದೆ. ವಿಶೇಷವಾಗಿ ಚುನಾವಣಾ ಅಕ್ರಮದ ಬಗ್ಗೆ ಮಾತನಾಡಿದ ನಂತರ ಜೀವ ಬೆದರಿಕೆ ಇದೆ ಎಂದು ಹೇಳಿದ್ದಾರೆ.
ದೂರುದಾರ ಸತ್ಯಕಿ ಸಾವರ್ಕರ್ ಅವರ ಕೌಟಿಂಬಿಕ ಹಿನ್ನಲೆ, ಅವರ ಹಿಂಸಾತ್ಮಕ ಮತ್ತು ಸಾಂವಿಧಾನಿಕ ವಿರೋಧಿ ಪ್ರವೃತ್ತಿಗಳ ಇತಿಹಾಸವನ್ನು ಗಮನಿಸಿದರೆ, ತಮ್ಮ ಜೀವಕ್ಕೆ ಅಪಾಯ ಇದೆ ಎಂಬುದು ಸ್ಪಷ್ಟವಾಗುತ್ತದೆ. ಇತಿಹಾಸವು ಪುನರಾವರ್ತನೆಯಾಗಬಾರದು. ಆದ್ದರಿಂದ ರಾಜ್ಯದಿಂದ ರಕ್ಷಣೆ ನೀಡಬೇಕು" ಎಂದು ಸಹ ರಾಹುಲ್ ಗಾಂಧಿ ಕೋರಿದ್ದಾರೆ.
"ಮಹಾತ್ಮ ಗಾಂಧಿಯವರ ಹತ್ಯೆಯು ಪ್ರಚೋದನೆಯಿಂದ ನಡೆದ ಕೃತ್ಯವಲ್ಲ; ಬದಲಾಗಿ, ನಿರಾಯುಧ ವ್ಯಕ್ತಿಯ ಮೇಲೆ ಉದ್ದೇಶಪೂರ್ವಕ ಹಿಂಸಾಚಾರ ನಡೆಸಿದ ನಿರ್ದಿಷ್ಟ ಸಿದ್ಧಾಂತದಲ್ಲಿ ಬೇರೂರಿರುವ ಪಿತೂರಿಯ ಪರಿಣಾಮವಾಗಿದೆ" ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಆಗಸ್ಟ್ 11 ರಂದು ಸಂಸತ್ತಿನಲ್ಲಿ ರಾಹುಲ್ ಗಾಂಧಿಯವರ "ವೋಟ್ ಚೋರ್ ಸರ್ಕಾರ್" ಎಂಬ ಘೋಷಣೆ ಮತ್ತು ಚುನಾವಣಾ ಅಕ್ರಮಗಳ ಬಗ್ಗೆ ದಾಖಲೆಗಳ ಬಿಡುಗಡೆ ರಾಜಕೀಯ ವಿರೋಧಿಗಳಿಂದ ಹಗೆತನವನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದ್ದಾರೆ.