ನವದೆಹಲಿ: ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ಎಲ್ಲರ ಗಮನ ಸೆಳೆದಿದ್ದ ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಕೌನ್ ಬನೇಗಾ ಕರೋಡ್‌ಪತಿ(ಕೆಬಿಸಿ) ವಿಶೇಷ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.
ಶಿವಸೇನೆ(ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಖಾಸಗಿ ಕಂಪನಿಗಳು ಒಂದೆಡೆ ದೇಶಭಕ್ತಿಯನ್ನು ಉತ್ತೇಜಿಸುತ್ತಾ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳಿಂದ ಲಾಭ ಗಳಿಸುತ್ತಿವೆ ಎಂದು ಬುಧವಾರ ಪರೋಕ್ಷವಾಗಿ ಟೀಕಿಸಿದ್ದಾರೆ.
ಈ ಕುರಿತು X ನಲ್ಲಿ ಪೋಸ್ಟ್ ಮಾಡಿರುವ ಚತುರ್ವೇದಿ, ಕಾರ್ಯಕ್ರಮವನ್ನು ಆಯೋಜಿಸುವ "ಖಾಸಗಿ ಮನರಂಜನಾ ಚಾನೆಲ್" ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ(SPNI)ದ ಮಾತೃ ಕಂಪನಿಯು 2031 ರವರೆಗೆ ಏಷ್ಯಾ ಕಪ್‌ನ ಹಕ್ಕುಗಳನ್ನು ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಈ ಕಂಪನಿಯು ಒಂದೆಡೆ ದೇಶಭಕ್ತಿಯನ್ನು ಬೆಂಬಲಿಸುತ್ತಿದೆ ಮತ್ತು ಮತ್ತೊಂದೆಡೆ ಎದುರಾಳಿಗಳ ನಡುವಿನ ಕ್ರಿಕೆಟ್ ಪಂದ್ಯಗಳಿಂದ ಲಾಭ ಗಳಿಸುತ್ತಿದೆ ಎಂದು ಪ್ರಿಯಾಂಕಾ ಟೀಕಿಸಿದ್ದಾರೆ.
ಆಪರೇಷನ್ ಸಿಂಧೂರ್‌ನ ಮುಖವಾಗಿದ್ದ "ವೀರ ಮಹಿಳೆಯರನ್ನು" ಮನರಂಜನೆಗಾಗಿ ಹೇಗೆ ಬಳಸಿಕೊಳ್ಳಲಾಗುತ್ತಿದೆ ಎಂಬುದರ ಕುರಿತು "ಈಗ ಪ್ರಶ್ನೆಗಳನ್ನು ಹುಟ್ಟು ಹಾಕಿದೆ" ಎಂದು ಅವರು ಹೇಳಿದ್ದಾರೆ.
"ಆಪರೇಷನ್ ಸಿಂಧೂರ್‌ನ ಮುಖವಾಗಿದ್ದ ನಮ್ಮ ಸಮವಸ್ತ್ರ ಧರಿಸಿದ ವೀರ ಮಹಿಳೆಯರನ್ನು ಖಾಸಗಿ ಮನರಂಜನಾ ಚಾನೆಲ್ ತನ್ನ ಕಾರ್ಯಕ್ರಮಕ್ಕೆ ಆಹ್ವಾನಿಸಿದೆ. ಈ ಖಾಸಗಿ ಮನರಂಜನಾ ಚಾನೆಲ್‌ನ ಮಾತೃ ಸಂಸ್ಥೆ ಸೋನಿ ಪಿಕ್ಚರ್ಸ್ ನೆಟ್‌ವರ್ಕ್ಸ್ ಇಂಡಿಯಾ (SPNI) 2031 ರವರೆಗೆ ಏಷ್ಯಾ ಕಪ್‌ನ ಪ್ರಸಾರ ಹಕ್ಕುಗಳನ್ನು ಪಡೆದುಕೊಂಡಿದೆ. ಹೌದು, ಭಾರತ vs ಪಾಕಿಸ್ತಾನ ಕ್ರಿಕೆಟ್ ಪಂದ್ಯಗಳ ಮೂಲಕ ಆದಾಯ ಗಳಿಸಲು ಬಯಸುವ ಚಾನೆಲ್ ಇದೇ" ಎಂದು ಚತುರ್ವೇದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇನ್ನು ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು, ಯಾವುದೇ ದೇಶದಲ್ಲಿ ಗಂಭೀರವಾದ ಮಿಲಿಟರಿ ಕಾರ್ಯಾಚರಣೆಯ ಅನಂತರ ನೀವು ಎಂದಾದರೂ ಈ ರೀತಿಯದ್ದನ್ನು ನೋಡಿದ್ದೀರಾ? ಸೇವೆಯಲ್ಲಿರುವ ಯಾರಿಗಾದರೂ ಇದನ್ನು ಹೇಗೆ ಅನುಮತಿಸಲಾಗುತ್ತದೆ? ಪ್ರಸ್ತುತ ಆಡಳಿತವು ನಮ್ಮ ಪಡೆಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಶಸ್ತ್ರ ಪಡೆಗಳ ಶಿಷ್ಟಾಚಾರವು ಕೆಬಿಸಿಯಂತಹ ರಿಯಾಲಿಟಿ ಶೋಗಳಿಗೆ ಅಧಿಕಾರಿಗಳನ್ನು ಕಳುಹಿಸಲು ಅವಕಾಶ ನೀಡುತ್ತದೆಯೇ ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಭಾರತೀಯ ಸಶಸ್ತ್ರ ಪಡೆಗಳಿಗೆ ಕೆಲವು ಶಿಷ್ಟಾಚಾರ, ಘನತೆ ಮತ್ತು ಅಪಾರ ಗೌರವವಿದೆ. ರಾಜಕಾರಣಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅದನ್ನು ಹಾಳು ಮಾಡುತ್ತಿದ್ದಾರೆ. ಅದು ನಾಚಿಕೆಗೇಡಿನ ಸಂಗತಿ ಎಂದು ಮತ್ತೊಬ್ಬರು ಹೇಳಿದ್ದಾರೆ. ನಮ್ಮ ಸೈನ್ಯವು ರಾಜಕೀಯಕ್ಕಿಂತ ಮೇಲಿತ್ತು. ಸಾರ್ವಜನಿಕ ಸಂಪರ್ಕವನ್ನು ಮೀರಿ ಪವಿತ್ರವಾಗಿತ್ತು. ನಮ್ಮ ಪಡೆಗಳು ರಾಜಕಾರಣಿಗಳ ಬ್ರ್ಯಾಂಡ್‌ನಲ್ಲ, ರಾಷ್ಟ್ರವನ್ನು ರಕ್ಷಿಸುವುದು ಎಂದು ಮತ್ತೊಬ್ಬರು ತಿಳಿಸಿದ್ದಾರೆ.