ನವದೆಹಲಿ: ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಲ್ಲಿನ ಮತಗಳ್ಳತನದ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ನಿರಂತರ ದಾಳಿಯ ಮಧ್ಯೆ, ಖಾರವಾಗಿ ಪ್ರತಿಕ್ರಿಯಿಸಿರುವ ಚುನಾವಣಾ ಆಯೋಗ, 'ವೋಟ್ ಚೋರಿ'ಯಂತಹ ಕೊಳಕು ನುಡಿಗಟ್ಟುಗಳನ್ನು ಬಳಸಿ ಸುಳ್ಳು ನಿರೂಪಣೆಯನ್ನು ಸೃಷ್ಟಿಸುವ ಬದಲು, ಪುರಾವೆಗಳನ್ನು ನೀಡಬೇಕು ಎಂದು ಗುರುವಾರ ಹೇಳಿದೆ.
'ಒಬ್ಬ ವ್ಯಕ್ತಿಗೆ ಒಂದು ಮತ' ಎಂಬ ಕಾನೂನು 1951-1952ರ ಮೊದಲ ಚುನಾವಣೆಗಳಿಂದಲೂ ಅಸ್ತಿತ್ವದಲ್ಲಿದೆ ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.
'ಯಾವುದೇ ಪುರಾವೆ ಇಲ್ಲದೆಯೇ ಭಾರತದ ಎಲ್ಲ ಮತದಾರರನ್ನು 'ಚೋರ್' ಎಂದು ಬಣ್ಣಿಸುವ ಬದಲು ಯಾವುದೇ ವ್ಯಕ್ತಿ ಯಾವುದೇ ಚುನಾವಣೆಯಲ್ಲಿ ಎರಡು ಬಾರಿ ಮತ ಚಲಾಯಿಸಿರುವುದಕ್ಕೆ ಯಾವುದೇ ಪುರಾವೆ ಇದ್ದರೆ, ಅಫಿಡವಿಟ್‌ನೊಂದಿಗೆ ಚುನಾವಣಾ ಆಯೋಗದೊಂದಿಗೆ ಹಂಚಿಕೊಳ್ಳಬೇಕು' ಎಂದು ಅದು ಹೇಳಿದೆ.
ಭಾರತೀಯ ಮತದಾರರಿಗೆ 'ವೋಟ್ ಚೋರಿ'ಯಂತಹ ಕೊಳಕು ನುಡಿಗಟ್ಟುಗಳನ್ನು ಬಳಸುವ ಮೂಲಕ ಸುಳ್ಳು ನಿರೂಪಣೆಯನ್ನು ರಚಿಸಲು ಪ್ರಯತ್ನಿಸುವುದು ಕೋಟ್ಯಂತರ ಭಾರತೀಯ ಮತದಾರರ ಮೇಲೆ ಮಾಡುವ ನೇರ ದಾಳಿ ಮಾತ್ರವಲ್ಲದೆ ಲಕ್ಷಾಂತರ ಚುನಾವಣಾ ಸಿಬ್ಬಂದಿಯ ಸಮಗ್ರತೆಯ ಮೇಲಿನ ದಾಳಿಯಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಲೋಕಸಭೆಯ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿ ಅವರು ಕಳೆದ ವಾರ ದತ್ತಾಂಶವನ್ನು ಉಲ್ಲೇಖಿಸಿ, 2024ರ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ 'ಕಳ್ಳತನ' ನಡೆದಿದೆ. ಇದರ ಪರಿಣಾಮವಾಗಿ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಸೋತರು ಎಂದು ಆರೋಪಿಸಿದರು.
ಚುನಾವಣಾ ಆಯೋಗವು ರಾಹುಲ್ ಗಾಂಧಿಯವರ ಆರೋಪಗಳ ಕುರಿತು ಸಹಿ ಹಾಕಿದ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿತ್ತು.