ನವದೆಹಲಿ: ಬೀದಿ ನಾಯಿಗಳ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ದೇಶಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿರುವಂತೆಯೇ ನಾಯಿ ಕಡಿತ ಮತ್ತು ರೇಬಿಸ್ ವೈರಸ್ ಕುರಿತು ಮನೇಕಾ ಗಾಂಧಿ ಸಹೋದರಿ ಮತ್ತು ಅನಿಮಲ್ ವೆಲ್ಫೇರ್ ಆ್ಯಕ್ಚಿವಿಸ್ಟ್ ಅಂಬಿಕಾ ಶುಕ್ಲಾ (Ambika Shukla) ನೀಡಿರುವ ಹೇಳಿಕೆ ವೈರಲ್ ಆಗಿದೆ.
ಹೌದು.. ಅಂಬಿಕಾ ಶುಕ್ಲಾ ಇತ್ತೀಚಿನ ಸುಪ್ರೀಂ ಕೋರ್ಟ್ ತೀರ್ಪು ಕುರಿತು ಮಾಧ್ಯಮಗಳ ಜೊತೆ ಮಾತನಾಡುತ್ತಾ, ರೇಬೀಸ್ ಒಂದು ಸೂಕ್ಷ್ಮ ವೈರಸ್ ಆಗಿದ್ದು, ಅದನ್ನು ಸೋಪಿನಿಂದ ತೊಳೆದು ಹೋಗಲಾಡಿಸಬಹುದು ಎಂದು ಹೇಳಿದ್ದಾರೆ.
ಬೀದಿಗಳಲ್ಲಿ ಅಲೆದಾಡುವ ಪ್ರಾಣಿಗಳನ್ನು ಆದಷ್ಟು ಬೇಗ ಆಶ್ರಯ ತಾಣಗಳಿಗೆ ಸ್ಥಳಾಂತರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಸುಪ್ರೀಂ ಕೋರ್ಟ್ ಆದೇಶದ ವಿರುದ್ಧ ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಪ್ರಾಣಿ ಪ್ರಿಯರು ನಡೆಸುತ್ತಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಅಂಬಿಕಾ ಶುಕ್ಲಾ ಈ ಹೇಳಿಕೆ ನೀಡಿದ್ದಾರೆ.
"ಶತಕೋಟಿ ಜನರಿರುವ ನಮ್ಮ ದೇಶದಲ್ಲಿ, ಪ್ರಕರಣಗಳ ಸಂಖ್ಯೆ ಎಷ್ಟು? ಕೇವಲ 54. ಹಾಗಾದರೆ ಏಕೆ ಕಡಿಮೆ? ಏಕೆಂದರೆ ಮೊದಲನೆಯದಾಗಿ, ರೇಬೀಸ್ ಬಹಳ ಅಪರೂಪದ ಕಾಯಿಲೆ. ಎರಡನೆಯದಾಗಿ, ಅದು ಸುಲಭವಾಗಿ ಹರಡುವುದಿಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾಯಿಗಳು ತಮಗೆ ಅಪಾಯವಾಗುತ್ತಿದೆ ಎಂದು ಭಾವಿಸದ ಹೊರತು ಅವು ಕಚ್ಚುವುದಿಲ್ಲ" ಎಂದು ಬಿಜೆಪಿ ಸಂಸದೆ ಮೇನಕಾ ಗಾಂಧಿಯವರ ಸಹೋದರಿಯೂ ಆಗಿರುವ ಅಂಬಿಕಾ ಶುಕ್ಲಾ ಹೇಳಿದ್ದಾರೆ.
'ಸೋಂಕು ಲಾಲಾರಸ ಅಥವಾ ರಕ್ತದ ಮೂಲಕ ರಕ್ತವನ್ನು ತಲುಪಿದಾಗ ಮಾತ್ರ ರೇಬೀಸ್ ವೈರಸ್ ಹರಡುತ್ತದೆ... ಇದು ಪ್ರಸರಣ ಮಾಧ್ಯಮ. ಆದರೆ ವೈರಸ್ ತುಂಬಾ ಸೂಕ್ಷ್ಮವಾಗಿದ್ದು, ನೀವು ಗಾಯವನ್ನು ಸೋಪಿನಿಂದ ತೊಳೆದರೂ ರೇಬೀಸ್ ವೈರಸ್ ಸಾಯುತ್ತದೆ" ಎಂದು ಅಂಬಿಕಾ ಶುಕ್ಲಾ ಹೇಳಿದ್ದು, ಈ ವಿಡಿಯೋವನ್ನು ‘ದಿ ರೆಡ್ ಮೈಕ್’ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ವ್ಯಾಪಕ ವಿರೋಧ
ಇನ್ನು ಅಂಬಿಕಾ ಶುಕ್ಲಾ ಅವರ ಹೇಳಿಕೆ ವ್ಯಾಪಕ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಹಲವಾರು ಬಳಕೆದಾರರು, ಅವರು ಹೇಳಿಕೆಯನ್ನು ಅಜ್ಞಾನಿ ಹೇಳಿಕೆ ಎಂದು ಟೀಕಿಸಿದ್ದಾರೆ. ಅಂತೆಯೇ ರೋಗಲಕ್ಷಣಗಳು ಕಾಣಿಸಿಕೊಂಡ ನಂತರ ಯಾವಾಗಲೂ ಮಾರಕವಾಗುವ ರೇಬೀಸ್ ಬಗ್ಗೆ ಇನ್ನಷ್ಟು ಓದಿ ತಿಳಿದುಕೊಳ್ಳಿ ಎಂದು ವ್ಯಂಗ್ಯ ಮಾಡಿದ್ದಾರೆ.