ಬುರ್ದ್ವಾನ್: ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬಿಹಾರದ ಹತ್ತು ಯಾತ್ರಾರ್ಥಿಗಳು ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಬುರ್ದಾನ್ ನಲ್ಲಿ ಶುಕ್ರವಾರ ನಡೆದಿದೆ. ಘಟನೆಯಲ್ಲಿ 35 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ಮೋತಿಹಾರಿಗೆ ಸೇರಿದ ಯಾತ್ರಾರ್ಥಿಗಳು ದಕ್ಷಿಣ 24 ಪರಗಣ ಜಿಲ್ಲೆಯ ಗಂಗಾಸಾಗರ್‌ಗೆ ಭೇಟಿ ನೀಡಿ ಮನೆಗೆ ಹಿಂದಿರುಗುತ್ತಿದ್ದಾಗ ಪುರ್ಬಾ ಬರ್ಧಮಾನ್ ಜಿಲ್ಲೆಯ ಫಗುಯಿಪುರ ಬಳಿಯ ರಾಷ್ಟ್ರೀಯ ಹೆದ್ದಾರಿ 19ರಲ್ಲಿ ಅಪಘಾತ ಸಂಭವಿಸಿದೆ.
ಮೃತಪಟ್ಟವರಲ್ಲಿ ಎಂಟು ಪುರುಷರು ಮತ್ತು ಇಬ್ಬರು ಮಹಿಳೆಯರು ಸೇರಿದ್ದಾರೆ.
ಆರು ಮಕ್ಕಳು ಸೇರಿದಂತೆ 35 ಮಂದಿ ಗಾಯಗೊಂಡಿದ್ದು, ಬುರ್ದ್ವಾನ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಐಷಾರಾಮಿ ಬಸ್‌ನಲ್ಲಿ 45 ಜನರಿದ್ದರು ಎನ್ನಲಾಗಿದೆ. ಅವರ ಕುಟುಂಬಗಳನ್ನು ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ" ಎಂದು ಅವರು ಹೇಳಿದ್ದಾರೆ.
ಯಾತ್ರಿಕರು ಆಗಸ್ಟ್ 8 ರಂದು ಮೋತಿಹಾರಿಯಿಂದ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದ್ದರು. ಮೊದಲು ದಿಯೋಘರ್‌ಗೆ ಭೇಟಿ ನೀಡಿದ್ದ ನಂತರ ಗಂಗಾಸಾಗರ್‌ಗೆ ತೆರಳುತ್ತಿದ್ದರು ಎಂದು ಮಾಹಿತಿ ದೊರೆತಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.