ನವದೆಹಲಿ: ಆಡಳಿತಾರೂಢ ಬಿಜೆಪಿ ಅಧಿಕಾರದಲ್ಲಿ ಉಳಿಯಲು ಯಾವುದೇ ಮಟ್ಟಕ್ಕಾದರೂ ಇಳಿಯಲು ಸಿದ್ಧವಾಗಿದೆ ಮತ್ತು ದೇಶಾದ್ಯಂತ ಚುನಾವಣೆಗಳಲ್ಲಿ ಹಲವಾರು 'ಅಕ್ರಮಗಳು' ಹೊರಹೊಮ್ಮುತ್ತಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಆರೋಪಿಸಿದ್ದಾರೆ.
ಇಂದಿರಾ ಭವನ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ, ಬಿಹಾರದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ವಿರೋಧ ಪಕ್ಷದ ಮತಗಳನ್ನು ಬಹಿರಂಗವಾಗಿ ಕಡಿತಗೊಳಿಸಲಾಗುತ್ತಿದೆ. ಜೀವಂತವಾಗಿರುವವರನ್ನು ಸತ್ತಿದ್ದಾರೆಂದು ಘೋಷಿಸಲಾಗುತ್ತಿದೆ ಎಂದು ಆರೋಪಿಸಿದರು.
'ಅತ್ಯಂತ ಆಶ್ಚರ್ಯಕರ' ವಿಷಯವೆಂದರೆ 65 ಲಕ್ಷ ಜನರ ಮತಗಳನ್ನು ಕಡಿತಗೊಳಿಸುವುದಕ್ಕೆ ಬಿಜೆಪಿಗೆ ಯಾವುದೇ ಆಕ್ಷೇಪವಿಲ್ಲ. SIR ನಿಂದ ಯಾರು ಲಾಭ ಪಡೆದರು ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ. ಇದು ಚುನಾವಣೆಗಳನ್ನು ಗೆಲ್ಲುವ ಹೋರಾಟವಲ್ಲ, ಬದಲಾಗಿ ಭಾರತದ ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಸಂವಿಧಾನವನ್ನು ರಕ್ಷಿಸಲು ನಡೆಯುತ್ತಿರುವ ಹೋರಾಟವಾಗಿದೆ ಎಂದು ಅವರು ಹೇಳಿದರು.
'ಈಗ ಆಡಳಿತ ಪಕ್ಷವು ಅಧಿಕಾರದಲ್ಲಿ ಉಳಿಯಲು ಯಾವುದೇ ಮಟ್ಟದ ಅನೈತಿಕತೆಗೆ ಹೋಗಲು ಸಿದ್ಧವಾಗಿದೆ. ಚುನಾವಣೆಗಳಲ್ಲಿ ದೊಡ್ಡ ಪ್ರಮಾಣದ ಅಕ್ರಮಗಳು ಬೆಳಕಿಗೆ ಬರುತ್ತಿವೆ' ಎಂದು ಅವರು ಆರೋಪಿಸಿದರು.
'ವಿಶೇಷ ತೀವ್ರ ಪರಿಷ್ಕರಣೆಯ ಹೆಸರಿನಲ್ಲಿ, ವಿರೋಧ ಪಕ್ಷಗಳ ಮತಗಳನ್ನು ಬಹಿರಂಗವಾಗಿ ಕಡಿತಗೊಳಿಸಲಾಗುತ್ತಿದೆ. ಜೀವಂತವಾಗಿರುವವರನ್ನು ಸತ್ತವರು ಎಂದು ಘೋಷಿಸಲಾಗಿದೆ. ಯಾರ ಮತಗಳನ್ನು ಮತ್ತು ಯಾವ ಆಧಾರದ ಮೇಲೆ ಕಡಿತಗೊಳಿಸಲಾಗುತ್ತಿದೆ ಎಂಬುದನ್ನು ಹೇಳಲು ಚುನಾವಣಾ ಆಯೋಗ ಸಿದ್ಧವಾಗಿಲ್ಲ. ಹೀಗಾಗಿ, ಇದು ನಿಷ್ಪಕ್ಷಪಾತತೆಯಿಂದ ಕೂಡಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬಹುದು' ಎಂದು ಅವರು ಹೇಳಿದರು.
'ಇ.ಡಿ ಮತ್ತು ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ಮುಂತಾದ ಕೇಂದ್ರದ ತನಿಖಾ ಸಂಸ್ಥೆಗಳನ್ನು ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ದುರುಪಯೋಗಪಡಿಸಿಕೊಳ್ಳುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಮಧ್ಯಪ್ರವೇಶಿಸಿ ಈ ಸಂಸ್ಥೆಗಳನ್ನು ಟೀಕಿಸಿದೆ' ಎಂದು ಕಾಂಗ್ರೆಸ್ ಮುಖ್ಯಸ್ಥರು ಹೇಳಿದ್ದಾರೆ.
'ಅಲಿಪ್ತ ನೀತಿ'ಯಿಂದಾಗಿ ಭಾರತ ಗಳಿಸಿದ್ದ ವಿಶೇಷ ಸ್ಥಾನವನ್ನು ಕಳೆದುಕೊಂಡಿದೆ. ಈ ದೇಶಕ್ಕಾಗಿ ಸ್ವಾತಂತ್ರ್ಯದ ವೀರರು ಕಂಡ ಕನಸು ಇಂದು ನಮ್ಮಿಂದ ದೂರವಾಗುತ್ತಿದೆ ಎಂದು ಅವರು ಹೇಳಿದರು.