ಲಖನೌ: ಆಘಾತಕಾರಿ ಮತಾಂತರ ದಂಧೆ ಪ್ರಕರಣವೊಂದರಲ್ಲಿ ಸಾಮ್ರಾಟ್ ಸಿಂಗ್ ಹೆಸರಿನಲ್ಲಿ ಹಿಂದೂ ವ್ಯಕ್ತಿ ಅಂತಾ ನಂಬಿಸಿ ಅನೇಕ ಹಿಂದೂ ಯುವತಿಯರನ್ನು ವಿವಾಹವಾಗಿದ್ದ ಶರಾಫ್ ರಿಜ್ವಿ ಎಂಬ ಮುಸ್ಲಿಂ ವ್ಯಕ್ತಿಯನ್ನು ಸಾರನಾಥ ಪೊಲೀಸರು ಫರೂಕಾಬಾದ್‌ನಿಂದ ಬಂಧಿಸಿದ್ದಾರೆ.
ಸಾರಾನಾಥದ ಮಹಿಳೆಯೊಬ್ಬರು ದೂರು ನೀಡಿದ ಬಳಿಕ ರಿಜ್ವಿ ಸಿಕ್ಕಿಬಿದ್ದಿದ್ದಾನೆ. ಈತ ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾನೆ. ರೂ.5 ಲಕ್ಷ ಸುಲಿಗೆ ಮಾಡಿದ್ದು, ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹಾಕುತ್ತಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ನಕಲಿ ಗುರುತಿನ ಮೂಲಕ ಉತ್ತರ ಪ್ರದೇಶ ಸೇರಿದಂತೆ ಮೂರು ರಾಜ್ಯಗಳಲ್ಲಿ ಕನಿಷ್ಠ 12 ಯುವತಿಯರನ್ನು ವಿವಾಹವಾಗಿರುವುದಾಗಿ ರಿಜ್ವಿ ವಿಚಾರಣೆಯ ಸಮಯದಲ್ಲಿ ಒಪ್ಪಿಕೊಂಡಿದ್ದಾನೆ ಎಂದು ಸಾರನಾಥ ಪೊಲೀಸರು ತಿಳಿಸಿದ್ದಾರೆ. ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ರಿಜ್ವಿ, ಹಣ ಮತ್ತು ಉಡುಗೊರೆಗಳನ್ನು ಸುಲಿಗೆ ಮಾಡುತ್ತಿದ್ದ. ದೈಹಿಕ ಸಂಬಂಧ ಹೊಂದಿದ್ದ ನಂತರ ತನ್ನ ನೈಜ ಗುರುತನ್ನು ಬಹಿರಂಗಪಡಿಸುತ್ತಿದ್ದ. ಆಗಾಗ್ಗೆ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರುತ್ತಿದ್ದ ಎನ್ನಲಾಗಿದೆ.
ಮೂರು ರೀತಿಯಲ್ಲಿ ಮಹಿಳೆಯರನ್ನು ಬೀಳಿಸುತ್ತಿದ್ದ ವಂಚಕ:
ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗಳಲ್ಲಿ ಮಹಿಳೆಯರನ್ನು ಗುರುತಿಸುತ್ತಿದ್ದ ರಿಜ್ವಿ, ತನ್ನನ್ನು ಶ್ರೀಮಂತ ಹಿಂದೂ ಉದ್ಯಮಿ ಎಂದು ಹೇಳಿಕೊಂಡು ಅವರನ್ನು ಭಾವನಾತ್ಮಕ ಮತ್ತು ಆರ್ಥಿಕವಾಗಿ ಸೆಳೆಯುತ್ತಿದ್ದ. ಒಮ್ಮೆ ನಂಬಿಕೆಯನ್ನು ಗಳಿಸಿ ದೈಹಿಕ ಸಂಬಂಧ ಹೊಂದಿದ್ದ ನಂತರ ಇಸ್ಲಾಂ ಧರ್ಮಕ್ಕೆ ಮತಾಂತರಕ್ಕೆ ಬಲವಂತಪಡಿಸುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಹಿಂದೂ ಹೆಸರುಗಳಲ್ಲಿ ಮೂರು ಫೇಸ್ ಬುಕ್ ಖಾತೆ ನಿರ್ವಹಣೆ:
ರಿಜ್ವಿ, ಸಾಮ್ರಾಟ್ ಸಿಂಗ್, ಅಜಯ್ ಕುಮಾರ್ ಮತ್ತು ವಿಜಯ್ ಕುಮಾರ್ ಎಂಬ ವಿಭಿನ್ನ ಹಿಂದೂ ಹೆಸರುಗಳಲ್ಲಿ ಮೂರು ಫೇಸ್‌ಬುಕ್ ಖಾತೆಗಳನ್ನು ನಿರ್ವಹಿಸುತ್ತಿರುವುದಾಗಿ ವರದಿಯಾಗಿದೆ. ಶರಫ್ ರಿಜ್ವಿಯ ನೈಜ ಖಾತೆಯು ಆನ್‌ಲೈನ್‌ನಲ್ಲಿ ಯಾವುದೇ ಗಮನ ಸೆಳೆದಿಲ್ಲ. ಆದರೆ ಆತನ ಹಿಂದೂ ಹೆಸರಿನ ಖಾತೆಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದ ನಂತರ ಹಿಂದೂ ಅಂತಾ ತೋರ್ಪಡಿಸಿಕೊಳ್ಳುವುದನ್ನು ಹೆಚ್ಚು ಮಾಡಿದ್ದಾಗಿ ಆತ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.
ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದು ಶ್ರೀಮಂತನಂತೆ ಪೋಸ್
Shaadi.com ನಂತಹ ಸೈಟ್‌ಗಳ ಮೂಲಕ ಚಂದದಾರನಾದ ನಂತರ ರಿಜ್ವಿ 100 ಕ್ಕೂ ಹೆಚ್ಚು ಮಹಿಳೆಯರು ಹಾಗೂ ಅವರ ಕುಟುಂಬಗಳೊಂದಿಗೆ ಸಂಪರ್ಕದಲ್ಲಿದ್ದ. ಹಲವಾರು ನಗರಗಳಲ್ಲಿ ಆಸ್ತಿ ಹೊಂದಿರುವ ರಫ್ತುದಾರ ಎಂದು ಹೇಳಿಕೊಂಡಿದ್ದ. ವೀಡಿಯೊ ಕರೆ ಮೂಲಕ ಅವರ ಕುಟುಂಬವನ್ನು ಪರಿಚಯಿಸಲು ಕೇಳಿದಾಗ, ಸ್ನೇಹಿತರನ್ನೇ ತನ್ನ ಕುಟುಂಬದವರು ಎಂದು ತೋರಿಸುತ್ತಿದ್ದ. ಐಷಾರಾಮಿ ಕಾರುಗಳನ್ನು ಬಾಡಿಗೆಗೆ ಪಡೆದು ದುಬಾರಿ ಉಡುಪುಗಳನ್ನು ಧರಿಸುತ್ತಿದ್ದ. ಕೋಟ್ಯಾಧೀಶನಂತೆ ಫೋಸ್ ನೀಡುತ್ತಿದ್ದ.
ದೈಹಿಕ ಸಂಬಂಧ ಹೊಂದಿ ಇಸ್ಲಾಂಗೆ ಮತಾಂತರಕ್ಕೆ ಒತ್ತಡ
ನಂಬಿಕೆ ಪಡೆದುಕೊಂಡ ನಂತರ ಮಹಿಳೆಯರನ್ನು ಭೇಟಿ ಮಾಡಿ, ದೈಹಿಕವಾಗಿ ಸಂಬಂಧ ಹೊಂದುತ್ತಿದ್ದ. ಮದುವೆಯ ವೆಚ್ಚಕ್ಕಾಗಿ ಹಣಕ್ಕೆ ಒತ್ತಡ ಹಾಕುತ್ತಿದ್ದ. ಹಲವು ಪ್ರಕರಣಗಳಲ್ಲಿ ಹಣ ಪಡೆದ ಬಳಿಕ ಸಂಪರ್ಕಕ್ಕೆ ಸಿಗುತ್ತಿರಲಿಲ್ಲ ಎನ್ನಲಾಗಿದೆ.
ರಿಜ್ವಿ ಆಗಾಗ್ಗೆ ಕಟ್ಟುಕಥೆ ಹೇಳಿ ಸಂಬಂಧವನ್ನು ಕೊನೆಗೊಳಿಸಿಕೊಳ್ಳುತ್ತಿದ್ದ. ಮುಖಾಮುಖಿಯಾದಾಗ ನಿಜವಾದ ಗುರುತನ್ನು ಹೇಳಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಮಹಿಳೆಯರ ಮೇಲೆ ಒತ್ತಡ ಹಾಕುತ್ತಿದ್ದ. ಕನಿಷ್ಠ 12 ಮಹಿಳೆಯರು ತನ್ನನ್ನು ಮದುವೆಯಾಗಲು ಮತಾಂತರಗೊಳ್ಳಲು ಒಪ್ಪಿಕೊಂಡಿದ್ದಾರೆ ಎಂದು ರಿಜ್ವಿ ಒಪ್ಪಿಕೊಂಡಿರುದಾಗಿ ಪೊಲೀಸರು ತಿಳಿಸಿದ್ದಾರೆ.
ರಿಜ್ವಿ ದೊಡ್ಡ ಮತಾಂತರ ಮತ್ತು ಸುಲಿಗೆ ದಂಧೆಕೋರ:
ಮದುವೆಯ ಸಿದ್ಧತೆಗಾಗಿ ರೂ. 5 ಲಕ್ಷ ನೀಡಿದ ನಂತರ ಆತನ ನಿಜವಾದ ಗುರುತು ಪತ್ತೆ ಹಚ್ಚಿದ ಸಾರನಾಥದ ಮಹಿಳೆ ದೂರು ದಾಖಲಿಸಿದ್ದಾರೆ. ತದನಂತರ ಆತನನ್ನು ಬಂಧಿಸಲಾಗಿದೆ. ಆಕೆಯ ಫ್ಲಾಟ್‌ನಲ್ಲಿ ಉಳಿದುಕೊಂಡಿದ್ದ ರಿಜ್ವಿ ವಾರಣಾಸಿ ಮತ್ತು ಲಕ್ನೋದಲ್ಲಿನ ಹೋಟೆಲ್‌ಗಳಿಗೆ ಆಕೆಯನ್ನು ಕರೆದೊಯ್ಯುತ್ತಿದ್ದ. ತದನಂತರ ಆಕೆ ಹಣ ಹಿಂತಿರುಗಿಸುವಂತೆ ಒತ್ತಾಯಿಸಿದಾಗ ಬೆದರಿಕೆ ಹಾಕುತ್ತಿದ್ದ ಎಂದು ವರದಿಯಾಗಿದೆ.
ರಿಜ್ವಿ ದೊಡ್ಡ ಮತಾಂತರ ಮತ್ತು ಸುಲಿಗೆ ದಂಧೆಕೋರನಾಗಿದ್ದಾನೆ ಎಂಬುದನ್ನು ಸಾರನಾಥದ ಎಸಿಪಿ ವಿಜಯ್ ಪ್ರತಾಪ್ ಖಚಿತಪಡಿಸಿದ್ದಾರೆ. ಆತ ಇಲ್ಲಿಯವರೆಗೆ ಸುಮಾರು 10-12 ಮಹಿಳೆಯರೊಂದಿಗೆ ವಿವಾಹವಾಗಿರುವುದು ತಿಳಿದುಬಂದಿದೆ. ಆತನ ಮತ್ತಷ್ಟು ಸಂಪರ್ಕಗಳು ಹಾಗೂ ಇಸ್ಲಾಮಿಕ್ ಸಂಘಟನೆಯೊಂದಿಗೆ ಸಂಭವನೀಯ ಸಂಪರ್ಕಗಳ ಕುರಿತು ತನಿಖೆ ಮಾಡುತ್ತಿದ್ದೇವೆ ಎಂದು ACP ತಿಳಿಸಿದ್ದಾರೆ.