ನವದೆಹಲಿ: 79ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ಸತತ 12ನೇ ಬಾರಿಗೆ ದೇಶದ ಜನತೆಯನ್ನುದ್ದೇಶಿಸಿ ಭಾಷಣ ಮಾಡಿದ್ದು, ಈ ಮೂಲಕ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿದಿದ್ದಾರೆ.
ಇಂದಿರಾ ಅವರು, 1966ರ ಜನವರಿಯಿಂದ 1977ರ ಮಾರ್ಚ್ ವರೆಗೆ ಹಾಗೂ 1980ರ ಜನವರಿಯಿಂದ 1984ರ ಅಕ್ಟೋಬರ್‌ವರೆಗೆ ಅಧಿಕಾರದಲ್ಲಿದ್ದರು. ಇಂದಿರಾ ಗಾಂಧಿಯವರು ಪ್ರಧಾನಿಯಾಗಿ ಒಟ್ಟು 16 ಬಾರಿ ಹಾಗೂ ಸತತವಾಗಿ 11 ಸಲ ಆಗಸ್ಟ್ 15ರಂದು ಧ್ವಜಾರೋಹಣ ಭಾಷಣ ಮಾಡಿದ್ದರು.
ದೇಶದಲ್ಲಿ ದೀರ್ಘಾವಧಿಗೆ ಪ್ರಧಾನಿಯಾಗಿದ್ದ ನೆಹರೂ ಅವರು ಒಟ್ಟು 17 ಬಾರಿ (1947–63) ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ್ದರು.
ನೆಹರೂ ನಂತರ ಪ್ರಧಾನಿಯಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿ ಅವರು 1964 ಹಾಗೂ 1965ರಲ್ಲಿ ಧ್ವಜಾರೋಹಣ ಭಾಷಣ ಮಾಡಿದ್ದರು. ಇಂದಿರಾ ಅವಧಿಯಲ್ಲಿ (1975ರ ಜೂನ್ 15– 1977ರ ಮಾರ್ಚ್ 21) ದೇಶದಲ್ಲಿ ತುರ್ತುಪರಿಸ್ಥಿತಿ ಜಾರಿಯಲ್ಲಿತ್ತು. ಅದಾದ ನಂತರ ಎರಡು ಸಲ ಅಂದರೆ 1977, 1978ರಲ್ಲಿ ಮೊರಾರ್ಜಿ ದೇಸಾಯಿ ಮತ್ತು 1979ರಲ್ಲಿ ಚೌಧರಿ ಚರಣ್ ಸಿಂಗ್ ಅವರು ಪ್ರಧಾನಿಯಾಗಿ ಧ್ವಜಾರೋಹಣ ನೆರವೇರಿಸಿದ್ದರು.
1984ರಲ್ಲಿ ಇಂದಿರಾ ಹತ್ಯೆಯಾದ ನಂತರ ಅಧಿಕಾರಕ್ಕೇರಿದ್ದ ಅವರ ಪುತ್ರ ರಾಜೀವ್ ಗಾಂಧಿ ಐದು ವರ್ಷ ಧ್ವಜಾರೋಹಣ ಮಾಡಿದ್ದರು. ಅವರ ನಂತರ ವಿ.ಪಿ. ಸಿಂಗ್ ಒಮ್ಮೆ (1990) ಹಾಗೂ ಪಿ.ವಿ. ನರಸಿಂಹ ರಾವ್ 1991ರಿಂದ 1995ರ ವರೆಗೆ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದರು. ಕನ್ನಡಿಗ ಎಚ್.ಡಿ. ದೇವೇಗೌಡ, ಐ.ಕೆ. ಗುಜ್ರಾಲ್ ಅವರು ಕ್ರಮವಾಗಿ 1996, 1997ರಲ್ಲಿ ಧ್ವಜಾರೋಹಣ ಭಾಷಣ ಮಾಡಿದ್ದರು.
1998ರ ಮಾರ್ಚ್‌ನಿಂದ 2004ರ ಮೇ ವರೆಗೆ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು 6 ಸಲ ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಅವರ ಬಳಿಕ 2004ರಲ್ಲಿ ಅಧಿಕಾರಕ್ಕೇರಿದ್ದ ಮನಮೋಹನ್ ಸಿಂಗ್ ಅವರು 2014ರವರೆಗೆ ಸತತ 10 ವರ್ಷ ಧ್ವಜಾರೋಹಣ ನೆರವೇರಿಸಿ, ಭಾಷಣ ಮಾಡಿದ್ದರು.
2014ರಲ್ಲಿ ಪ್ರಧಾನಿಯಾದ ನರೇಂದ್ರ ಮೋದಿ ಅವರು ಸತತ 3ನೇ ಅವಧಿಗೂ, ಅಧಿಕಾರದಲ್ಲಿ ಮುಂದುವರಿದಿದ್ದಾರೆ. ಕೆಂಪುಕೋಟೆಯಲ್ಲಿ ಸತತ 12ನೇ ಬಾರಿ ಧ್ವಜಾರೋಹಣ ನೆರವೇರಿಸಿರುವುದಷ್ಟೇ ಅಲ್ಲದೆ, ಸ್ವಾತಂತ್ರ್ಯೋತ್ಸವದಂದು ಅತ್ಯಂತ ದೀರ್ಘಾವಧಿಯ ಭಾಷಣ ಮಾಡಿದ ದಾಖಲೆಯನ್ನೂ ಮೋದಿ ಹೊಂದಿದ್ದಾರೆ. ಕಳೆದ ವರ್ಷ ದೇಶವನ್ನುದ್ದೇಶಿಸಿ 98 ನಿಮಿಷ ಮಾತನಾಡಿದ್ದ ಅವರು, ಈ ಸಲ 103 ನಿಮಿಷ ಭಾಷಣ ಮಾಡಿದ್ದಾರೆ.