ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಭಾರಿ ಮಳೆಯಾಗುತ್ತಿದ್ದು, ಶನಿವಾರ ಪೂರ್ವ ಉಪನಗರ ವಿಖ್ರೋಲಿಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ಬರುವ ವಿಖ್ರೋಲಿ ಪಾರ್ಕ್‌ಸೈಟ್‌ನ ವರ್ಷಾ ನಗರದಲ್ಲಿ ಇಂದು ಬೆಳಗಿನ ಜಾವ 2.39 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಹತ್ತಿರದ ಗುಡ್ಡದ ಮಣ್ಣು ಮತ್ತು ಕಲ್ಲುಗಳು ಗುಡಿಸಲಿನ ಮೇಲೆ ಕುಸಿದು ಬಿದ್ದ ಪರಿಣಾಮ ನಾಲ್ವರು ಗಾಯಗೊಂಡಿದ್ದಾರೆ ಎಂದು ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಂದೇ ಕುಟುಂಬಕ್ಕೆ ಸೇರಿದ ಗಾಯಾಳುಗಳನ್ನು ರಾಜವಾಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರು ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸರು ಮತ್ತು ನಾಗರಿಕ ಸಿಬ್ಬಂದಿ ಸೇರಿದಂತೆ ತುರ್ತು ರಕ್ಷಣಾ ತಂಡಗಳನ್ನು ತಕ್ಷಣ ಸ್ಥಳಕ್ಕೆ ಕರೆಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.
ಮೃತರನ್ನು ಶಾಲು ಮಿಶ್ರಾ(19) ಮತ್ತು ಸುರೇಶ್ ಮಿಶ್ರಾ(50) ಎಂದು ಗುರುತಿಸಲಾಗಿದ್ದು, ಆದರೆ ಇತರ ಇಬ್ಬರು, ಆರತಿ ಮಿಶ್ರಾ (45) ಮತ್ತು ರುತುರಾಜ್ ಮಿಶ್ರಾ (20) ಗಾಯಗೊಂಡಿದ್ದಾರೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರದೇಶದ ಇತರ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.