ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರು ರಾಜ್ಯಕ್ಕೆ ವಾಪಸ್ ಬಂದರೆ ಅವರಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಘೋಷಿಸಿದ್ದಾರೆ.
ರಾಜ್ಯದ ಆಡಳಿತ ಕೇಂದ್ರವಾದ ನಬನ್ನಾದಲ್ಲಿ ನಡೆದ ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ, ಬಂಗಾಳಿ ವಲಸೆ ಕಾರ್ಮಿಕರಿಗಾಗಿ 'ಶ್ರಮಶ್ರೀ' ಎಂಬ ಹೊಸ ಯೋಜನೆ ಘೋಷಿಸಿದರು.
ಇತರ ರಾಜ್ಯಗಳಿಂದ ಪಶ್ಚಿಮ ಬಂಗಾಳಕ್ಕೆ ಮರಳಿದಾಗ ವಲಸೆ ಕಾರ್ಮಿಕರು 'ಖಾದ್ಯ ಸತಿ' ಮತ್ತು 'ಸ್ವಸ್ಥ ಸತಿ' ನಂತಹ ಸಾಮಾಜಿಕ ಪ್ರಯೋಜನಗಳನ್ನು ಪಡೆಯುವುದರ ಜೊತೆಗೆ 'ಶ್ರಮಶ್ರೀ' ಯೋಜನೆಯಡಿ ಮುಂದಿನ 12 ತಿಂಗಳವರೆಗೆ ಮಾಸಿಕ 5,000 ರೂ.ಗಳ ಆರ್ಥಿಕ ನೆರವು ಪಡೆಯಲಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ಮುಖ್ಯಮಂತ್ರಿ, "ಈ ಯೋಜನೆ ಬಂಗಾಳದಿಂದ ವಲಸೆ ಹೋಗಿರುವ ಕಾರ್ಮಿಕರಿಗೆ ಮಾತ್ರ. ರಾಜ್ಯಕ್ಕೆ ಮರಳುವವರಿಗೆ ಪ್ರಯಾಣ ಸಹಾಯದ ಜೊತೆಗೆ 5,000 ರೂ.ಗಳ ಒಂದು ಬಾರಿ ಪಾವತಿಯನ್ನು ಪಡೆಯುತ್ತಾರೆ. ಇದು ಪುನರ್ವಸತಿ ಭತ್ಯೆ. ಅವರಿಗೆ ಹೊಸ ಕೆಲಸದ ವ್ಯವಸ್ಥೆ ಮಾಡುವವರೆಗೆ ತಿಂಗಳಿಗೆ 5,000 ರೂ.ಗಳ ಆರ್ಥಿಕ ನೆರವನ್ನು ಒಂದು ವರ್ಷದವರೆಗೆ ನೀಡಲಾಗುವುದು" ಎಂದು ತಿಳಿಸಿದರು.
ಪಶ್ಚಿಮ ಬಂಗಾಳ ಕಾರ್ಮಿಕ ಇಲಾಖೆಯು ಈ ಯೋಜನೆಯ ನೋಡಲ್ ಇಲಾಖೆಯಾಗಿದೆ. ರಾಜ್ಯ ಸರ್ಕಾರದ 'ಉತ್ಕರ್ಷ್ ಬಾಂಗ್ಲಾ' ಯೋಜನೆಯ ಮೂಲಕ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಮಾಹಿತಿ ನೀಡಿದರು.
"ನಾವು ರಾಜ್ಯಕ್ಕೆ ಮರಳುವ ಕಾರ್ಮಿಕರ ಕೌಶಲ್ಯಗಳನ್ನು ನಿರ್ಣಯಿಸುತ್ತೇವೆ. ಅವರಿಗೆ ಅಗತ್ಯವಾದ ಕೌಶಲ್ಯಗಳಿದ್ದರೆ, ಅಗತ್ಯವಿರುವ ತರಬೇತಿ ನೀಡುವ ಮೂಲಕ ನಾವು ಉದ್ಯೋಗವನ್ನು ಒದಗಿಸುತ್ತೇವೆ. ಇದರ ಹೊರತಾಗಿ, ನಾವು ಅವರಿಗೆ 'ಉದ್ಯೋಗ ಕಾರ್ಡ್‌ಗಳನ್ನು' ಸಹ ನೀಡುತ್ತೇವೆ" ಎಂದು ಅವರು ಹೇಳಿದರು,