ಪಾಲಕ್ಕಾಡ್: ಉತ್ತರ ಕೇರಳ ಜಿಲ್ಲೆಯ ಕೊಯಿಂಜಂಪರದಲ್ಲಿ ಸೋಮವಾರ ಬೆಳಿಗ್ಗೆ ನಡೆದ ಭೀಕರ ಅಪಘಾತದಲ್ಲಿ, ಏಳು ವರ್ಷದ ಬಾಲಕಿಯೊಬ್ಬಳು ಸ್ಕೂಟರ್‌ನಿಂದ ಬಿದ್ದಿದ್ದು, ಬಸ್ ಆಕೆಯ ಮೇಲೆ ಹರಿದ ಪರಿಣಾಮ ತಂದೆಯ ಕಣ್ಣೆದುರಲ್ಲೇ ಸಾವಿಗೀಡಾಗಿರುವ ಧಾರುಣ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತಳನ್ನು ಕೊಯಿಂಜಂಪರದ ಸೇಂಟ್ ಪೌಲ್ಸ್ ಶಾಲೆಯಲ್ಲಿ ಎರಡನೇ ತರಗತಿ ವಿದ್ಯಾರ್ಥಿನಿ ನಫಿಸಾತ್ ಮಿಸ್ರಿಯಾ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ನಫಿಸಾತ್ ಮತ್ತು ಆಕೆಯ ತಂದೆ ಪಾಲಕ್ಕಾಡ್-ಪೊಲ್ಲಾಚಿ ರಸ್ತೆಯಲ್ಲಿರುವ ಶಾಲೆಯ ಕಡೆಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ರಸ್ತೆಯಲ್ಲಿ ದೊಡ್ಡ ಗುಂಡಿ ಬಿದ್ದಿದ್ದರಿಂದ ಮುಂದೆ ಬರುತ್ತಿದ್ದ ಆಟೋ ರಿಕ್ಷಾ ಹಠಾತ್ ಬ್ರೇಕ್ ಹಾಕಿದ ನಂತರ ಸ್ಕೂಟರ್ ನಿಯಂತ್ರಣ ಕಳೆದುಕೊಂಡಿದೆ. ಬಳಿಕ ಬೈಕ್‌ನಲ್ಲಿದ್ದ ತಂದೆ ಮತ್ತು ಮಗಳು ರಸ್ತೆಗೆ ಬಿದ್ದಿದ್ದಾರೆ. ನಫಿಸಾತ್ ರಸ್ತೆಯ ಬಲಭಾಗಕ್ಕೆ ಬಿದ್ದು ಹಿಂದಿನಿಂದ ಬಂದ ಬಸ್ ಅವರ ಮೇಲೆ ಹರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆ ಸ್ಥಳದಲ್ಲೇ ಮೃತಪಟ್ಟರೂ, ಸ್ಥಳದಲ್ಲಿ ಜಮಾಯಿಸಿದ ಜನರು ಆಕೆಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಅಪಘಾತದಲ್ಲಿ ಮೃತಳ ತಂದೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಅವರು ಹೇಳಿದರು.
ರಸ್ತೆಗಳು ಕೆಟ್ಟದಾಗಿರುವುದರಿಂದ ಅಪಘಾತಗಳು ಆಗಾಗ್ಗೆ ಸಂಭವಿಸುತ್ತಿವೆ ಎಂದು ಆರೋಪಿಸಿ ಜನರು ಪ್ರತಿಭಟನೆ ನಡೆಸಿದರು.
ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಶೀಘ್ರದಲ್ಲೇ ಪ್ರಕರಣ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಶವವನ್ನು ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಬಾಲಕಿಯ ದುರಂತ ಸಾವಿಗೆ ರಾಜ್ಯ ಸಾಮಾನ್ಯ ಶಿಕ್ಷಣ ಸಚಿವ ವಿ ಶಿವನ್‌ಕುಟ್ಟಿ ಸಂತಾಪ ಸೂಚಿಸಿದ್ದಾರೆ.
ಶಿವನ್‌ಕುಟ್ಟಿ ತಮ್ಮ ಫೇಸ್‌ಬುಕ್ ಪುಟದಲ್ಲಿ ನಫಿಸಾತ್ ಅವರ ಫೋಟೊವನ್ನು ಹಂಚಿಕೊಂಡಿದ್ದು, 'ಕೊಯಿಂಜಂಪರದಲ್ಲಿ ಬಸ್ ಡಿಕ್ಕಿ ಹೊಡೆದು ಎರಡನೇ ತರಗತಿ ವಿದ್ಯಾರ್ಥಿನಿ ನಫಿಸಾತ್ ಮಿಸ್ರಿಯಾ ಸಾವಿಗೀಡಾದ ಸುದ್ದಿ ಕೇಳಿ ನನಗೆ ತುಂಬಾ ದುಃಖವಾಯಿತು. ಅವಳು ತನ್ನ ತಂದೆಯೊಂದಿಗೆ ಸ್ಕೂಟರ್‌ನಲ್ಲಿ ಶಾಲೆಗೆ ಹೋಗುತ್ತಿದ್ದಾಗ ಈ ಹೃದಯವಿದ್ರಾವಕ ಘಟನೆ ಸಂಭವಿಸಿದೆ ಮತ್ತು ನಮ್ಮೆಲ್ಲರನ್ನೂ ತೀವ್ರ ದುಃಖದಲ್ಲಿ ಮುಳುಗಿಸಿದೆ' ಎಂದಿದ್ದಾರೆ.
'ಕನಸುಗಳಿಂದ ತುಂಬಿದ್ದ ಆ ಪುಟ್ಟ ಮಗುವಿನ ಹಠಾತ್ ಸಾವಿನಿಂದ ಸಹಿಸಲಾಗದಷ್ಟು ನೋವುಂಟು ಮಾಡಿದೆ. ಈ ದುರಂತದ ಸಮಯದಲ್ಲಿ ನಫಿಸಾತ್ ಮಿಸ್ರಿಯಾ ಅವರ ಕುಟುಂಬ, ಸಹಪಾಠಿಗಳು ಮತ್ತು ಶಿಕ್ಷಕರ ದುಃಖದಲ್ಲಿ ನಾನು ಭಾಗಿಯಾಗಿದ್ದೇನೆ' ಎಂದರು.