ನವದೆಹಲಿ: ಗಂಭೀರ ಕ್ರಿಮಿನಲ್ ಆರೋಪಗಳ ಮೇಲೆ ಕನಿಷ್ಠ ಐದು ವರ್ಷಗಳ ಜೈಲು ಶಿಕ್ಷೆಗೆ ಅರ್ಹವಾದ ಅಪರಾಧಗಳಲ್ಲಿ ಬಂಧನಕ್ಕೊಳಗಾಗಿ, ಸತತ 30 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿರುವ ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳು ಮತ್ತು ಸಚಿವರನ್ನು ಅವರ ಹುದ್ದೆಯಿಂದ ತೆಗೆದುಹಾಕುವ ಮೂರು ಮಸೂದೆಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಇಂದು ಮಂಡಿಸಿದರು.
ಸಚಿವರು ವಿಧೇಯಕ ಮಂಡಿಸುತ್ತಿದ್ದಂತೆ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೆಲವರು ಮಸೂದೆಗಳ ಪ್ರತಿಗಳನ್ನು ಹರಿದು ಹಾಕಿ ಅಮಿತ್ ಶಾ ಮೇಲೆ ಎಸೆದರು.
ಎಐಎಂಐಎಂನ ಅಸಾದುದ್ದೀನ್ ಓವೈಸಿ ಮತ್ತು ಕಾಂಗ್ರೆಸ್‌ನ ಮನೀಷ್ ತಿವಾರಿ ಮತ್ತು ಕೆ ಸಿ ವೇಣುಗೋಪಾಲ್ ಸೇರಿದಂತೆ ಸೇರಿದಂತೆ ಹಲವು ವಿರೋಧ ಪಕ್ಷಗಳ ಸದಸ್ಯರು ಮಸೂದೆ ವಿರುದ್ಧ ಮಾತನಾಡಿದರು. ಉದ್ದೇಶಿತ ವಿಧೇಯಕ ಸಂವಿಧಾನ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ ಎಂದು ಆರೋಪಿಸಿದರು.
ತರಾತುರಿಯಲ್ಲಿ ಮಸೂದೆ ಮಂಡಿಸಲಾಗುತ್ತಿದೆ ಎಂಬ ಟೀಕೆಗಳನ್ನು ತಳ್ಳಿಹಾಕಿದ ಅಮಿತ್ ಶಾ, ಅವುಗಳನ್ನು ಸಂಸತ್ತಿನ ಜಂಟಿ ಸಮಿತಿಗೆ ಕಳುಹಿಸಲಾಗುವುದು, ಅಲ್ಲಿ ಪ್ರತಿಪಕ್ಷಗಳು ಸೇರಿದಂತೆ ಉಭಯ ಸದನಗಳ ಸದಸ್ಯರು ತಮ್ಮ ಸಲಹೆಗಳನ್ನು ನೀಡಲು ಅವಕಾಶವಿದೆ ಎಂದು ಹೇಳಿದರು.
ಅಮಿತ್ ಶಾ ಗುಜರಾತ್ ನಲ್ಲಿ ಗೃಹ ಸಚಿವರಾಗಿದ್ದಾಗ ಆಗಿದ್ದ ಬಂಧನ ವಿಚಾರವನ್ನು ಪ್ರಸ್ತಾಪಿಸಿದ ವೇಣುಗೋಪಾಲ್, ರಾಜಕೀಯದಲ್ಲಿ ಅವರ ನೈತಿಕತೆಯನ್ನು ಪ್ರಶ್ನಿಸುತ್ತಿದ್ದಂತೆಯೇ ಅವರಿಗೆ ತಿರುಗೇಟು ನೀಡಿದ ಹಿರಿಯ ಬಿಜೆಪಿ ನಾಯಕರು, ಅಮಿತ್ ಶಾ ಬಂಧನಕ್ಕೂ ಮೊದಲೇ ನೈತಿಕತೆ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿದ್ದರು. ಆರೋಪ ಮುಕ್ತರಾದ ನಂತರವೇ ಸರ್ಕಾರಕ್ಕೆ ಸೇರಿಕೊಂಡರು ಎಂದು ವಿರೋಧ ಪಕ್ಷಗಳ ವಿರುದ್ಧ ಮುಗಿಬಿದ್ದರು.
ಗಂಭೀರ ಆರೋಪ ಎದುರಿಸುತ್ತಿದ್ದರೂ ಸಂವಿಧಾನಿಕ ಹುದ್ದೆಯಲ್ಲಿ ನಾಚಿಕೆಯಿಲ್ಲದೆ ನಾವು ಮುಂದುವರೆಯುವುದಿಲ್ಲಎಂದು ಅಮಿತ್ ಶಾ ಹೇಳಿದರು. ವಿರುದ್ಧ ಪಕ್ಷಗಳ ಗದ್ದಲ, ಪ್ರತಿಭಟನೆ ಹಿನ್ನೆಲೆಯಲ್ಲಿ ಲೋಕಸಭೆ ಕಲಾಪವನ್ನು ಮಧ್ಯಾಹ್ನ 3 ಗಂಟೆಯವರೆಗೂ ಮುಂದೂಡಲಾಯಿತು.