ನವದೆಹಲಿ: 2020 ರಿಂದ 2024 ರ ನಡುವೆ ದೇಶದ ವಿವಿಧ ಬಂದರುಗಳಿಂದ 11,310 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಬುಧವಾರ ರಾಜ್ಯಸಭೆಗೆ ತಿಳಿಸಿದೆ.
ಈ ಕುರಿತು ಲಿಖಿತ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು, ಕಳೆದ ಐದು ವರ್ಷಗಳಲ್ಲಿ ಮಾದಕ ವಸ್ತುಗಳ ನಿಯಂತ್ರಣ ಬ್ಯೂರೋಗೆ ವರದಿಯಾಗಿರುವ ಮತ್ತು ವಶಪಡಿಸಿಕೊಂಡ ಎಲ್ಲಾ ಮಾದಕ ವಸ್ತುಗಳ ಡೇಟಾವನ್ನು ಹಂಚಿಕೊಂಡರು.
ಗುಜರಾತ್ ಬಂದರುಗಳಿಂದ 7,350 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಏಜೆನ್ಸಿಗಳು ವಶಪಡಿಸಿಕೊಂಡಿವೆ. ನಂತರ ಮಹಾರಾಷ್ಟ್ರದಿಂದ 2,367 ಕೋಟಿ ರೂ., ತಮಿಳುನಾಡಿನಿಂದ 1,515 ಕೋಟಿ ರೂ. ಮತ್ತು ಪಶ್ಚಿಮ ಬಂಗಾಳದಿಂದ 78.017 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಗುಜರಾತ್‌ನಲ್ಲಿ, 2021-22ರಲ್ಲಿ ಮುಂದ್ರಾದ ಅದಾನಿ ಬಂದರು ವಿಶೇಷ ಆರ್ಥಿಕ ವಲಯದಿಂದ ಮೂರು ಪ್ರತ್ಯೇಕ ಸರಕುಗಳಲ್ಲಿ 3,063 ಕೆಜಿ ಹೆರಾಯಿನ್ ಮತ್ತು 52 ಕೆಜಿ ಕೊಕೇನ್ ಸೇರಿದಂತೆ 6,386 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದತ್ತಾಂಶ ತೋರಿಸಿದೆ.
ಗುಜರಾತ್‌ನ ಅಂಕಿಅಂಶಗಳ ಪ್ರಕಾರ, ಗಾಂಧಿಧಾಮ್‌ನ ಸಿಎಫ್‌ಎಸ್ (ಕಂಟೇನರ್ ಸರಕು ಸಾಗಣೆ ವ್ಯವಸ್ಥೆ) ನಿಂದ 402 ಕೋಟಿ ರೂ. ಮೌಲ್ಯದ 201 ಕೆಜಿ ಹೆರಾಯಿನ್, ಪಿಪಾವಾವ್ ಬಂದರಿನಿಂದ 180 ಕೋಟಿ ರೂ. ಮೌಲ್ಯದ 90 ಕೆಜಿ ಹೆರಾಯಿನ್, ಗಾಂಧಿಧಾಮ್‌ನ ಎವಿ ಜೋಶಿ ಸಿಎಫ್‌ಎಸ್‌ನಿಂದ 5 ಕೋಟಿ ರೂ. ಮೌಲ್ಯದ 1 ಕೆಜಿ ಕೊಕೇನ್ ಮತ್ತು ಸಿಎಫ್‌ಎಸ್ ಮುಂದ್ರಾದಿಂದ ಎರಡು ವಿಭಿನ್ನ ಸರಕುಗಳಲ್ಲಿ 377 ಕೋಟಿ ರೂ. ಮೌಲ್ಯದ 94.19 ಲಕ್ಷ ಟ್ರಾಮಾಡಾಲ್ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.