ನವದೆಹಲಿ: ರಾಷ್ಟ್ರ ರಾಜಧಾನಿಯ 50ಕ್ಕೂ ಹೆಚ್ಚು ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ ಮೇಲ್ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
'terrorisers 111' ಎಂಬ ಗುಂಪು DAV ಪಬ್ಲಿಕ್ ಸ್ಕೂಲ್, ಫೇಯ್ತ್ ಅಕಾಡೆಮಿ, ಡೂನ್ ಪಬ್ಲಿಕ್ ಸ್ಕೂಲ್, ಸರ್ವೋಧಯ ವಿದ್ಯಾಲಯ ಸೇರಿದಂತೆ ವಿವಿಧ ಶಾಲೆಗಳಿಗೆ 25,000 ಅಮೆರಿಕನ್ ಡಾಲರ್ ಗೆ ಬೇಡಿಕೆ ಇಟ್ಟು ಬೆದರಿಕೆಯ ಮೇಲ್ ಕಳುಹಿಸಿದೆ.
ಇದೇ ಗುಂಪು ಆಗಸ್ಟ್ 18 ರಂದು ಬಾಂಬ್ ಬೆದರಿಕೆ ಕರೆ ಕಳುಹಿಸುವ ಮೂಲಕ 5,000 ಅಮೆರಿಕನ್ ಡಾಲರ್ ಗೆ ಬೇಡಿಕೆ ಇಟ್ಟಿತ್ತು.
ವಿವಿಧ ಶಾಲೆಗಳ ಪ್ರಾಂಶುಪಾಲರು ಮತ್ತು ಆಡಳಿತ ಸಿಬ್ಬಂದಿಗೆ ಇ-ಮೇಲ್ ಕಳುಹಿಸಿರುವ ಗುಂಪು, ಶಾಲೆಯ ಸಿಸಿಟಿವಿ ಕ್ಯಾಮರಾ, ವಿದ್ಯಾರ್ಥಿಗಳ ಸಂಖ್ಯೆ ಸೇರಿದಂತೆ ಎಲ್ಲಾ ಮಾಹಿತಿ ತಮ್ಮ ಬಳಿ ಇದ್ದು, ಶಾಲೆಯ ಆವರಣದಾದ್ಯಂತ 48 ಗಂಟೆಗಳ ಒಳಗೆ ಬಾಂಬ್‌ಗಳನ್ನು ಸ್ಫೋಟಿಸುವುದಾಗಿ ಹೇಳಿದ್ದಾರೆ.
"ನಾವು ಟೆರರಿಸರ್ಸ್ 111 ಗುಂಪು. ನಿಮ್ಮ ಕಟ್ಟಡದ ಒಳಗೆ ಮತ್ತು ನಗರದ ಇತರೆಡೆ ಬಾಂಬ್ ಇಟ್ಟಿದ್ದೇವೆ. ಹೆಚ್ಚಿನ ಸಾಮರ್ಥ್ಯದ C4 ಬಾಂಬ್‌ಗಳು ಸೇರಿದಂತೆ ಸ್ಪೋಟಕ ಸಾಧನಗಳನ್ನು ತರಗತಿಗಳು, ಸಭಾಂಗಣಗಳು, ಸಿಬ್ಬಂದಿ ಕೊಠಡಿಗಳು ಮತ್ತು ಶಾಲಾ ಬಸ್‌ಗಳಲ್ಲಿ ಇಟ್ಟಿದ್ದು, ಅಪಾರ ಸಾವು-ನೋವು ಉಂಟು ಮಾಡುವಂತೆ ವಿನ್ಯಾಸಗೊಳಿಸಲಾಗಿದೆ. 48 ಗಂಟೆಗಳ ಒಳಗಾಗಿ 2000 ಅಮೆರಿಕನ್ ಡಾಲರ್ ವರ್ಗಾಯಿಸಿ, ಇಲ್ಲದಿದ್ದರೆ ಬಾಂಬ್ ಸ್ಪೋಟಿಸಲಾಗುವುದು ಎಂದು ಇ-ಮೇಲ್ ನಲ್ಲಿ ಹೇಳಲಾಗಿತ್ತು.
ರಾಷ್ಟ್ರ ರಾಜಧಾನಿಯ ಹಲವಾರು ಶಾಲೆಗಳಿಗೆ "ಟೆರರೈಸರ್ಸ್ 111 ಎಂದು ಹೇಳಲಾದ ಗುಂಪಿನಿಂದ ಇಮೇಲ್ ಕಳುಹಿಸಲಾಗಿತ್ತು. 72 ಗಂಟೆಗಳ ಒಳಗೆ ಕ್ರಿಪ್ಟೋಕರೆನ್ಸಿಯಲ್ಲಿ $5,000 ವರ್ಗಾಯಿಸುವಂತೆ ಬೇಡಿಕೆ ಇಡಲಾಗಿತ್ತು. ಅಷ್ಟು ಹಣವನ್ನು ಕಳುಹಿಸದಿದ್ದಲ್ಲಿ ಶಾಲೆಯ ಆವರಣದಲ್ಲಿ ಬಾಂಬ್‌ಗಳನ್ನು ಸ್ಫೋಟಿಸಲಾಗುವುದು ಎಂದು ಬೆದರಿಕೆ ಹಾಕಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.