ಗಾಜಿಯಾಬಾದ್: ದೆಹಲಿಯಲ್ಲಿ ಬೀದಿನಾಯಿಗಳ ಕುರಿತ ಪರ-ವಿರೋಧ ಚರ್ಚೆಗಳು ಇರುವಂತೆಯೇ ಇತ್ತ ನಾಯಿಗಳಿಗೆ ಆಹಾರ ನೀಡಿದ ಯುವತಿಗೆ ವ್ಯಕ್ತಿಯೋರ್ವ ಬರೊಬ್ಬರಿ 8 ಬಾರಿ ಕಪಾಳ ಮೋಕ್ಷ ಮಾಡಿರುವ ವಿಡಿಯೋ ವೈರಲ್ ಆಗುತ್ತಿದೆ.
ಹೌದು.. ಬೀದಿ ನಾಯಿಗಳನ್ನು ಆಶ್ರಯ ತಾಣಕ್ಕೆ ರವಾನೆ ಮಾಡಬೇಕು ಎಂಬ ಕೋರ್ಟ್ ಆದೇಶಕ್ಕೆ ದೇಶಾದ್ಯಂತ ವ್ಯಾಪಕ ಪರ-ವಿರೋಧ ಚರ್ಚೆಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ತನ್ನ ನಿರ್ಧಾರ ಸಡಿಲಗೊಳಿಸಿದ್ದ ಕೋರ್ಟ್ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿ ನಾಯಿಗಳನ್ನು ಮತ್ತೆ ಅದೇ ಜಾಗದಲ್ಲಿ ಬಿಡಬಹುದು ಎಂದು ಹೇಳಿತ್ತು.
ಆ ಮೂಲಕ ಶ್ವಾನ ಪ್ರಿಯರಿಗೆ ಸಮಾಧಾನ ನೀಡಿತ್ತು. ಇದರೊಂದಿಗೆ ಬೀದಿನಾಯಿ ವಿವಾದ ಅಂತ್ಯವಾಗಿದೆ ಎನ್ನುವಾಗಲೇ ಮತ್ತದೇ ವಿಚಾರಕ್ಕೆ ವ್ಯಕ್ತಿಯೋರ್ವ ಯುವತಿಗೆ ಬರೊಬ್ಬರಿ 8 ಬಾರಿ ಕಪಾಳಮೋಕ್ಷ ಮಾಡಿದ್ದಾನೆ.
ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಜನವಸತಿ ಸಮುಚ್ಚಯದ ಬಳಿ ಯುವತಿಯೊಬ್ಬಳು ಬೀದಿನಾಯಿಗಳಿಗೆ ಆಹಾರ ನೀಡುತ್ತಿದ್ದಾಗ ಆಕೆ ಮೇಲೆರಗಿದ ವ್ಯಕ್ತಿ ಕಪಾಳ ಮೋಕ್ಷ ಮಾಡಿದ್ದಾನೆ.
ಆಗಿದ್ದೇನು?
ಗಾಜಿಯಾಬಾದ್ ನ ವಿಜಯನಗರದಲ್ಲಿರುವ ಬ್ರಹ್ಮಪುತ್ರ ಎನ್ಕ್ಲೇವ್ ಸೊಸೈಟಿ (Brahmaputra Enclave Society) ಅಪಾರ್ಟ್ ಮೆಂಟ್ ಬಳಿ ಸ್ಥಳೀಯ ನಿವಾಸಿ ಯಶಿಕಾ ಶುಕ್ಲಾ (Yashika Shukla) ಎಂಬ ಯುವತಿ ಬೀದಿನಾಯಿಗಳಿಗೆ ಆಹಾರ ನೀಡುತ್ತಿದ್ದರು.
ಈ ವೇಳೆ ಇದನ್ನು ಗಮನಿಸಿದ ಕಮಲ್ ಖನ್ನಾ (Kamal Khanna) ಯುವತಿ ನಡೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೇ ನೋಡ ನೋಡುತ್ತಲೇ ಆಕೆಯ ಕಪಾಳಕ್ಕೆ ಥಳಿಸಿದ್ದಾರೆ. ಈ ವೇಳೆ ಗೊಂದಲಕ್ಕೀಡಾದ ಯುವತಿ ಏಕೆ ಹೊಡೆಯುತ್ತಿದ್ದೀರಿ ಎಂದು ಪ್ರಶ್ನಿಸಿದಾಗ ನೀವು ನಾಯಿಗಳಿಗೆ ಆಹಾರ ನೀಡುವುದರಿಂದಲೇ ಅವರು ಇಲ್ಲಿ ಆಹಾರ ಸಿಗುತ್ತವೆ ಎಂದು ಇಲ್ಲಿದೆ ಬರುತ್ತವೆ. ಇಲ್ಲಿ ಎಲ್ಲರನ್ನೂ ಕಚ್ಚುತಿವೆ ಎಂದು ಮತ್ತೆ ಆಕೆಯ ಕಪಾಳಕ್ಕೆ ಥಳಿಸಿದ್ದಾರೆ.
38 ಸೆಕೆಂಡ್ ನಲ್ಲಿ 8 ಬಾರಿ ಕಪಾಳಮೋಕ್ಷ
ಕಮಲ್ ಖನ್ನಾ ಆಕ್ರೋಶ ಎಷ್ಟಿತ್ತು ಎಂದರೆ ಆಕೆಯೊಂದಿಗೆ ಜಗಳಕ್ಕಿಳಿದ ಕೇವಲ 38 ಸೆಕೆಂಡ್ ನಲ್ಲಿ ಬರೊಬ್ಬರಿ 8 ಬಾರಿ ಯುವತಿ ಕಪಾಳಕ್ಕೆ ಬಾರಿಸಿದ್ದಾರೆ. ಈ ವೇಳೆ ಯುವತಿ ತನ್ನೊಂದಿಗೆ ಇದ್ದವರಿಗೆ ಮೊಬೈಲ್ ನಲ್ಲಿ ವಿಡಿಯೋ ಮಾಡುವಂತೆ ಹೇಳಿದ್ದು ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ವಿಡಿಯೋ ಮಾಡು.. ಭಯವೇನಿಲ್ಲ
ಇನ್ನು ಯುವತಿ ಮಾತಿಗೆ ಖಾರವಾದ ಕಮಲ್ ಖನ್ನಾ ಮತ್ತೆ ಆಕೆಯ ಕಪಾಳಕ್ಕೆ ಬಾರಿಸಿ ವಿಡಿಯೋ ಮಾಡಿಕೋ.. ಎಂದು ಹೇಳಿದ್ದಾರೆ.
ಪೊಲೀಸ್ ದೂರು, ವ್ಯಕ್ತಿ ವಶಕ್ಕೆ!
ಇನ್ನು ಈ ಹಲ್ಲೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಲೇ ಹಲ್ಲೆ ಮಾಡಿದ ಕಮಲ್ ಖನ್ನಾ ವಿರುದ್ಧ ಯುವತಿ ಯಶಿಕಾ ಪೊಲೀಸ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಮಲ್ ಖನ್ನಾ ರನ್ನು ವಶಕ್ಕೆ ಪಡೆದಿದ್ದು, ಈ ವೇಳೆ ಕಮಲ್ ಖನ್ನಾ ಕೂಡ ಯುವತಿ ಯಶಿಕಾ ತನ್ನ ಮೇಲೆ ಹಲ್ಲೆ ಮಾಡಿದ್ದಾಳೆ ಎಂದು ಪ್ರತಿ ದೂರು ನೀಡಿದ್ದಾರೆ.
ಆಕ್ರೋಶಕ್ಕೆ ಕಾರಣವೇನು?
ಬ್ರಹ್ಮಪುತ್ರ ಎನ್ಕ್ಲೇವ್ ಸೊಸೈಟಿ ಬಳಿ ಇತ್ತೀಚಿನ ದಿನಗಳಲ್ಲಿ ಬೀದಿನಾಯಿಗಳ ಹಾವಳಿ ಹೆಚ್ಚಿತ್ತು. ಇಲ್ಲಿ ಜನರು ನಾಯಿಗಳಿಗೆ ನಿತ್ಯವೂ ಆಹಾರ ನೀಡುತ್ತಿದ್ದರಿಂದ ಇಲ್ಲಿ ನಾಯಿಗಳ ಸಂಖ್ಯೆ ಹೆಚ್ಚಿತ್ತು. ಅಲ್ಲದೆ ಇಲ್ಲಿ ತಿರುಗಾಡುವವರ ಮೇಲೆಯೂ ನಾಯಿಗಳು ದಾಳಿ ಮಾಡುತ್ತಿದ್ದವು. ಇದು ಕಮಲ್ ಖನ್ನಾ ಆಕ್ರೋಶಕ್ಕೆ ಕಾರಣ ಎನ್ನಲಾಗಿದೆ.