ಐಎನ್ಎಸ್ ಹಿಮಗಿರಿ ಮತ್ತು ಉದಯಗಿರಿ ನೌಕೆಗಳು 
ದೇಶ

Indian Navy ಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ! Video

ಇತ್ತೀಚೆಗಷ್ಟೇ INS ತಮಾಲ್ ಯುದ್ಧ ನೌಕೆಯನ್ನು ಭಾರತೀಯ ನೌಕಾಪಡೆ ಸೇರಿಸಿಕೊಂಡಿತ್ತು. ಇದೀಗ ಮತ್ತೆರಡು ಯುದ್ಧ ನೌಕೆಗಳು ಅಂದರೆ ಐಎನ್ಎಸ್ ಉದಯಗಿರಿ ಮತ್ತು ಐಎನ್ಎಸ್ ಹಿಮಗಿರಿ ಯುದ್ಧನೌಕೆಗಳು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.

ನವದೆಹಲಿ: ಮಹತ್ವದ ಬೆಳವಣಿಗೆಯಲ್ಲಿ ಭಾರತೀಯ ನೌಕಾಪಡೆಗೆ ಮತ್ತಷ್ಟು ಬಲ ಬಂದಿದ್ದು, ನೌಕಾಪಡೆಯು ಇಂದು ಏಕಕಾಲದಲ್ಲಿ ಎರಡು ನೀಲಗಿರಿ-ವರ್ಗದ ರಹಸ್ಯ ಮಾರ್ಗದರ್ಶಿ-ಕ್ಷಿಪಣಿ ಯುದ್ಧನೌಕೆಗಳನ್ನು ತನ್ನ ಬತ್ತಳಿಕೆಗೆ ಸೇರಿಸಿಕೊಂಡಿದೆ.

ಇತ್ತೀಚೆಗಷ್ಟೇ INS ತಮಾಲ್ ಯುದ್ಧ ನೌಕೆಯನ್ನು ಭಾರತೀಯ ನೌಕಾಪಡೆ ಸೇರಿಸಿಕೊಂಡಿತ್ತು. ಇದೀಗ ಮತ್ತೆರಡು ಯುದ್ಧ ನೌಕೆಗಳು ಅಂದರೆ ಐಎನ್ಎಸ್ ಉದಯಗಿರಿ ಮತ್ತು ಐಎನ್ಎಸ್ ಹಿಮಗಿರಿ ಯುದ್ಧನೌಕೆಗಳು ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದೆ.

ಸೇನಾ ಮೂಲಗಳ ಪ್ರಕಾರ, 'ಎರಡು ಯುದ್ಧನೌಕೆಗಳು, ಈ ವರ್ಷದ ಆರಂಭದಲ್ಲಿ INS ನೀಲಗಿರಿಯನ್ನು ನಿಯೋಜಿಸಲಾದ ಪ್ರಾಜೆಕ್ಟ್ 17 ಆಲ್ಫಾ (P-17A) ನ ಭಾಗವಾಗಿದೆ' ಎಂದು ಹೇಳಲಾಗಿದೆ.

ಇದೇ ಮೊದಲ ಬಾರಿಗೆ ಎರಡು ಪ್ರತಿಷ್ಠಿತ ಭಾರತೀಯ ಶಿಪ್‌ಯಾರ್ಡ್‌ಗಳಿಂದ, ಎರಡು ಪ್ರಮುಖ ಯುದ್ಧನೌಕೆಗಳನ್ನು ಒಂದೇ ಸಮಯದಲ್ಲಿ ನಿಯೋಜನೆ ಮಾಡಲಾಗಿದೆ. ಇದರೊಂದಿಗೆ ದೇಶದ ಕೈಗಾರಿಕಾ-ತಾಂತ್ರಿಕ ಸಾಮರ್ಥ್ಯಕ್ಕೆ ಉದಾಹರಣೆಯಾಗಿ ಪ್ರಾದೇಶಿಕ ಶಕ್ತಿ ಸಮತೋಲನ ಪ್ರದರ್ಶಿಸುವ ಮೂರು ಯುದ್ಧನೌಕೆಗಳ ಸ್ಕ್ವಾಡ್ರನ್‌ನನ್ನು ಭಾರತ ಹೊಂದಿದಂತಾಗಿದೆ.

ಎರಡೂ ಹಡಗುಗಳನ್ನು 200ಕ್ಕೂ ಹೆಚ್ಚು MSME ಗಳನ್ನು ವ್ಯಾಪಿಸಿರುವ ಕೈಗಾರಿಕಾ ಪರಿಸರ ವ್ಯವಸ್ಥೆಯಲ್ಲಿ ನಿರ್ಮಾಣ ಮಾಡಲಾಗಿದ್ದು, ಈ ಕೈಗಾರಿಕಾ ಪ್ರದೇಶ ಸುಮಾರು 4,000 ನೇರ ಉದ್ಯೋಗಗಳು ಮತ್ತು 10,000ಕ್ಕೂ ಹೆಚ್ಚು ಪರೋಕ್ಷ ಉದ್ಯೋಗಗಳನ್ನು ಬೆಂಬಲಿಸುತ್ತದೆ.

ಐಎನ್ಎಸ್ ಉದಯಗಿರಿಯನ್ನು ಮುಂಬೈನಲ್ಲಿ ಮಜಗಾಂವ್ ಡಾಕ್ ಶಿಪ್‌ಬಿಲ್ಡರ್ಸ್ ಲಿಮಿಟೆಡ್ (MDL) ನಿರ್ಮಿಸಿದೆ ಮತ್ತು ಇದು ನೌಕಾಪಡೆಯ ಯುದ್ಧನೌಕೆ ವಿನ್ಯಾಸ ಬ್ಯೂರೋ ವಿನ್ಯಾಸಗೊಳಿಸಿದ 100ನೇ ಹಡಗು ಎಂಬ ಖ್ಯಾತಿಯನ್ನು ಹೊಂದಿದೆ. ಅದೇ ರೀತಿ ಐಎನ್ಎಸ್ ಹಿಮಗಿರಿ ಕೋಲ್ಕತ್ತಾದಲ್ಲಿ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ & ಎಂಜಿನಿಯರ್ಸ್ (GRSE) ನಿರ್ಮಿಸುತ್ತಿರುವ P-17A ಹಡಗುಗಳಲ್ಲಿ ಮೊದಲನೆಯದಾಗಿದೆ.

ವಿಶೇಷತೆ

ಸುಮಾರು 6,700 ಟನ್‌ ತೂಕದ INS ಉದಯಗಿರಿ ಮತ್ತು INS ಹಿಮಗಿರಿ P-17A ಫ್ರಿಗೇಟ್‌ಗಳು, ಅವುಗಳ ಹಿಂದಿನ ಶಿವಾಲಿಕ್-ವರ್ಗದ ಫ್ರಿಗೇಟ್‌ಗಳಿಗಿಂತ ಗಾತ್ರದಲ್ಲಿ ಸರಿಸುಮಾರು ಶೇ.5ರಷ್ಟು ದೊಡ್ಡದಾಗಿವೆ. ನಯವಾದ ರೂಪ ಮತ್ತು ಆಧುನಿಕ ರಾಡಾರ್‌ ವ್ಯವಸ್ಥೆಯನ್ನು ಹೊಂದಿವೆ.

ಇತ್ತೀಚಿಗೆ INS ಅರ್ನಾಲಾ ನೌಕೆ ಭಾರತೀಯ ನೌಕಾಪಡೆಯ ಬತ್ತಳಿಕೆ ಸೇರಿಕೊಂಡಿತ್ತು. ಈ ಯುದ್ಧ ನೌಕೆಗಳು ಡೀಸೆಲ್ ಎಂಜಿನ್‌ಗಳು ಮತ್ತು ಗ್ಯಾಸ್ ಟರ್ಬೈನ್‌ಗಳನ್ನು ಬಳಸಿಕೊಂಡು, ಸಂಯೋಜಿತ ಡೀಸೆಲ್ ಅಥವಾ ಗ್ಯಾಸ್ (CODOG) ಪ್ರೊಪಲ್ಷನ್ ಪ್ಲಾಂಟ್‌ಗಳಿಂದ ನಿಯಂತ್ರಿಸಲ್ಪಡುತ್ತವೆ. ಇದು ನಿಯಂತ್ರಿಸಬಹುದಾದ-ಪಿಚ್ ಪ್ರೊಪೆಲ್ಲರ್‌ಗಳನ್ನು ಚಾಲನೆ ಮಾಡುತ್ತವೆ ಮತ್ತು ಇಂಟಿಗ್ರೇಟೆಡ್ ಪ್ಲಾಟ್‌ಫಾರ್ಮ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (IPMS) ಮೂಲಕ ನಿರ್ವಹಿಸಲ್ಪಡುತ್ತವೆ.

"INS ಉದಯಗಿರಿ ಮತ್ತು INS ಹಿಮಗಿರಿ ಯುದ್ಧ ನೌಕೆಗಳು ಸೂಪರ್‌ಸಾನಿಕ್ ಮೇಲ್ಮೈಯಿಂದ ಮೇಲ್ಮೈಗೆ ಚಿಮ್ಮುವ ಕ್ಷಿಪಣಿಗಳು, ಮಧ್ಯಮ-ಶ್ರೇಣಿಯ ಮೇಲ್ಮೈಯಿಂದ ಗಾಳಿಗೆ ಚಿಮ್ಮುವ ಕ್ಷಿಪಣಿಗಳು, 76 mm MR ಗನ್ ಮತ್ತು 30 mm ಮತ್ತು 12.7 mm ಕ್ಲೋಸ್-ಇನ್ ಶಸ್ತ್ರಾಸ್ತ್ರ ವ್ಯವಸ್ಥೆಗಳು ಮತ್ತು ಜಲಾಂತರ್ಗಾಮಿ ವಿರೋಧಿ ಅಥವಾ ಅಂಡರ್‌ವಾಟರ್ ಶಸ್ತ್ರಾಸ್ತ್ರ ವ್ಯವಸ್ಥೆಗಳನ್ನು ಒಳಗೊಂಡಿವೆ" ಎಂದು ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಐಎನ್‌ಎಸ್ ಉದಯಗಿರಿ

ಮುಂಬೈ ಮೂಲದ ಮಡಗಾವ್ ಡಾಕ್ ಶಿಪ್‌ಬಿಲ್ಡರ್ಸ್‌ನಿಂದ ಈ ಐಎನ್ಎಸ್ ಉದಯಗಿರಿ ಯುದ್ಧನೌಕೆಯನ್ನು ತಯಾರಿಸಲಾಗಿದೆ. ಇದು 149 ಮೀಟರ್ ಉದ್ದವಿದ್ದು, ಗರಿಷ್ಠ 28 ನಾಟ್‌ಗಳ ವೇಗ, ಅಂದರೆ ಗಂಟೆಗೆ ಸುಮಾರು 52 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯಹೊಂದಿದೆ.

ಶಸ್ತ್ರಾಸ್ತ್ರಗಳ ಪೈಕಿ ಉದಯಗಿರಿ ನೌಕೆಯಲ್ಲಿ 48 ಬರಾಕ್-8 ಕ್ಷಿಪಣಿಗಳು ಮತ್ತು ಎಂಟು ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳು ಇವೆ. ಇದಲ್ಲದೆ ಎರಡು ಹೆಲಿಕಾಪ್ಟರ್‌ಗಳನ್ನು ಈ ನೌಕೆ ನಿರ್ವಹಿಸಬಲ್ಲದಾಗಿದೆ. ಡೀಸೆಲ್ ಎಂಜಿನ್‌ಗಳು ಮತ್ತು ಗ್ಯಾಸ್ ಟರ್ಬೈನ್‌ಗಳಿಂದ ಚಾಲಿತವಾಗಿದ್ದು, ಅವು ನಿಯಂತ್ರಿಸಬಹುದಾದ-ಪಿಚ್ ಪ್ರೊಪೆಲ್ಲರ್‌ಗಳನ್ನು ಚಾಲನೆ ಮಾಡುತ್ತವೆ ಮತ್ತು ಸಂಯೋಜಿತ ನಿರ್ವಹಣಾ ಇಂಟರ್ಫೇಸ್ ಮೂಲಕ ನಿರ್ವಹಿಸಲ್ಪಡುತ್ತವೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.

ಐಎನ್‌ಎಸ್ ಹಿಮಗಿರಿ

ಕೋಲ್ಕತ್ತಾ ಮೂಲದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್‌ನಿಂದ ಈ ಐಎನ್ಎಸ್ ಹಿಮಗಿರಿ ನೌಕೆಯನ್ನು ತಯಾರಿಸಲಾಗಿದೆ. ಹಿಮಗಿರಿ ನೌಕೆ ಕೂಡ ಐಎನ್ಎಸ್ ಉದಯಗಿರಿಯಂತೆಯೇ ಉದ್ದ, ತೂಕ ಮತ್ತು ಗರಿಷ್ಠ ವೇಗ, ಮತ್ತು ಎರಡು ಹೆಲಿಕಾಪ್ಟರ್‌ಗಳನ್ನು ಸಹ ಸಾಗಿಸಬಹುದು. ಶಸ್ತ್ರಾಸ್ತ್ರಗಳಲ್ಲಿ 32 ಬರಾಕ್-8 ಕ್ಷಿಪಣಿಗಳು ಮತ್ತು ಎಂಟು ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿಗಳು ಸೇರಿವೆ. ಮಾರೀಚ್ ಟಾರ್ಪಿಡೊ ಡಿಕಾಯ್ ವ್ಯವಸ್ಥೆಯನ್ನು ಸಹ ಹೊಂದಿದೆ.

ಕಡಲ ಭದ್ರತೆ

ಭಾರತಕ್ಕೆ ಪ್ರಮುಖ ಸವಾಲು ಎಂದರೆ ಚೀನಾದ ಬೆಳೆಯುತ್ತಿರುವ ಕಡಲ ವಿಸ್ತರಣೆ, ಇದು 'string of pearls' ನೀತಿಯಡಿಯಲ್ಲಿ ಗ್ವಾದರ್ (ಪಾಕಿಸ್ತಾನ), ಹಂಬಂಟೋಟ (ಶ್ರೀಲಂಕಾ), ಚಿತ್ತಗಾಂಗ್ (ಬಾಂಗ್ಲಾದೇಶ) ಮತ್ತು ಜಿಬೌಟಿಯಲ್ಲಿ ತನ್ನ ಹಿಡಿತವನ್ನು ಸ್ಥಾಪಿಸಿದೆ.

ಅಂತಹ ಪರಿಸ್ಥಿತಿಯಲ್ಲಿ, ನೀಲಗಿರಿ ವರ್ಗದ ಯುದ್ಧನೌಕೆಗಳು ಭಾರತಕ್ಕೆ ಬಲವಾದ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುತ್ತವೆ. ಈ ಯುದ್ಧನೌಕೆಗಳು ಸಮುದ್ರ ವ್ಯಾಪಾರ ಮಾರ್ಗಗಳನ್ನು ರಕ್ಷಿಸುವುದಲ್ಲದೆ, ಮಲಕ್ಕಾ ಜಲಸಂಧಿಯಿಂದ ಆಫ್ರಿಕಾದವರೆಗಿನ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಭಾರತದ ನೌಕಾ ಉಪಸ್ಥಿತಿಯನ್ನು ವಿಶ್ವಾಸಾರ್ಹವಾಗಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT