ಚೆನ್ನೈ: ತಮಿಳುನಾಡು ಶೂಟಿಂಗ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬಿಜೆಪಿ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ (K Annamalai) ಕೈಯಿಂದ ಪದಕ ಪಡೆಯಲು ಡಿಎಂಕೆ ಸಚಿವನ ಪುತ್ರ ನಿರಾಕರಿಸಿರುವ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಹೌದು.. ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರ ಪುತ್ರ ಸೂರ್ಯ ರಾಜ ಬಾಲು, ಬಿಜೆಪಿಯ ಅಣ್ಣಾಮಲೈ ಅವರಿಂದ ಪ್ರಶಸ್ತಿ ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ್ದಾರೆ.
51ನೇ ರಾಜ್ಯ ಶೂಟಿಂಗ್ ಕ್ರೀಡಾಕೂಟದಲ್ಲಿ ವಿಶೇಷ ಅತಿಥಿಯಾಗಿ ತೆರಳಿದ್ದ ಬಿಜೆಪಿ ನಾಯಕ ಕೆ ಅಣ್ಣಾಮಲೈ ಅವರು ಪ್ರಶಸ್ತಿ ವಿಜೇತರಿಗೆ ಪದಕ ಹಾಕುತ್ತಿದ್ದರು. ಈ ವೇಳೆ ತಮಿಳುನಾಡು ಕೈಗಾರಿಕಾ ಸಚಿವ ಟಿಆರ್‌ಬಿ ರಾಜಾ ಅವರ ಪುತ್ರ ಸೂರ್ಯ ರಾಜ ಬಾಲು ತನ್ನ ಕುತ್ತಿಗೆಗೆ ಪದಕ ಹಾಕಿಸಿಕೊಳ್ಳಲು ನಿರಾಕರಿಸಿ, ಅದನ್ನು ಕೈಯಲ್ಲಿ ಸ್ವೀಕರಿಸಿದ್ದಾನೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಆತ ಪ್ರತಿಭಾನ್ವಿತ, ಅದು ಅವನಿಚ್ಛೆ!
ಇನ್ನು ಈ ಮುಜುಗರದ ಸನ್ನಿವೇಶದ ಹೊರತಾಗಿಯೂ ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ ಡಿಎಂಕೆ ಪುತ್ರನ ಕುರಿತು ಸಕಾರಾತ್ಮಕ ಮಾತುಗಳನ್ನಾಡಿರುವ ಅಣ್ಣಾಮಲೈ, 'ಅದು ದೊಡ್ಡ ವಿಷಯವಲ್ಲ.. ಆತ ಪ್ರತಿಭಾನ್ವಿತ, ಯಾರ ಕೈಯಿಂದ ಪ್ರಶಸ್ತಿ ಸ್ವೀಕರಿಸಬೇಕು ಎಂಬುದು ಅವರ ಇಚ್ಛೆ.. ಆತ ಎಲ್ಲಿದ್ದರೂ ಚೆನ್ನಾಗಿರಬೇಕು. ಇಂತಹುದೇ ದೊಡ್ಡ ದೊಡ್ಡ ಸಾಧನೆ ಮಾಡಬೇಕು. ಯಾರ ಕೈಯಿಂದ ಪ್ರಶಸ್ತಿ ಸ್ವೀಕರಿಸದರು ಎಂಬುದು ಮುಖ್ಯವಲ್ಲ.. ಏನು ಸಾಧನೆ ಮಾಡಿದರು ಅದು ಮುಖ್ಯವಾಗುತ್ತದೆ ಎಂದು ಹೇಳಿದರು.
2ನೇ ಘಟನೆ
ಸ್ವಲ್ಪ ದಿನಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತು. ತಿರುನಲ್ವೇಲಿಯ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32 ನೇ ಘಟಿಕೋತ್ಸವದಲ್ಲಿ, ಡಾಕ್ಟರೇಟ್ ವಿದ್ಯಾರ್ಥಿನಿ ಜೀನ್ ಜೋಸೆಫ್ ವೇದಿಕೆಯಲ್ಲಿ ರಾಜ್ಯಪಾಲ ಆರ್.ಎನ್. ರವಿ ಅವರಿಂದ ಪದವಿ ಪಡೆಯುವ ಬದಲು ಅವರ ಹಿಂದೆ ನಡೆದುಕೊಂಡು ಹೋಗಿ ಕುಲಪತಿಗಳಿಂದ ಪದವಿ ಪಡೆದಿದ್ದರು.