ಜಮ್ಮು: ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಮತ್ತೆ ಮೇಘಸ್ಫೋಟವಾಗಿದ್ದು, ಭಾರೀ ಮಳೆಯಿಂದ ಐವರು ಸಾವನ್ನಪ್ಪಿದ್ದಾರೆ ಮತ್ತು ಎರಡು ಡಜನ್‌ಗೂ ಹೆಚ್ಚು ಮನೆಗಳು ಹಾಗೂ ಸೇತುವೆಗಳು ಕೊಚ್ಚಿ ಹೋಗಿವೆ.
ಬಹುತೇಕ ಎಲ್ಲಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ನಗರ ಮತ್ತು ಇತರೆಡೆ ಹಲವಾರು ತಗ್ಗು ಪ್ರದೇಶಗಳು ಮತ್ತು ರಸ್ತೆಗಳು ಮುಳುಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು ಪ್ರಾಂತ್ಯದ ಹಲವು ಭಾಗಗಳಲ್ಲಿ ಪರಿಸ್ಥಿತಿ "ಸಾಕಷ್ಟು ಗಂಭೀರವಾಗಿದೆ" ಮತ್ತು ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಲು ಶ್ರೀನಗರದಿಂದ ಜಮ್ಮುವಿಗೆ ಭೇಟಿ ನೀಡುವುದಾಗಿ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಭಾರೀ ಮಳೆಯಿಂದ ಜಮ್ಮು-ಶ್ರೀನಗರ ಮತ್ತು ಕಿಶ್ತ್ವಾರ್-ದೋಡಾ ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಅಲ್ಲದೆ ಭೂಕುಸಿತ ಅಥವಾ ಹಠಾತ್ ಪ್ರವಾಹದಿಂದ ಅಲ್ಲದೆ ಡಜನ್ಗಟ್ಟಲೆ ಗುಡ್ಡಗಾಡು ರಸ್ತೆಗಳನ್ನು ನಿರ್ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ಮಾತಾ ವೈಷ್ಣೋದೇವಿ ದೇಗುಲಕ್ಕೆ ತೀರ್ಥಯಾತ್ರೆಯನ್ನು ಸಹ ಸ್ಥಗಿತಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಗಂಡೋದಲ್ಲಿ ಇಬ್ಬರು ಮತ್ತು ಥಾಥ್ರಿಯಲ್ಲಿ ಒಬ್ಬರು ಸೇರಿದಂತೆ ಮಳೆ ಸಂಬಂಧಿತ ಪ್ರತ್ಯೇಕ ಘಟನೆಗಳಲ್ಲಿ ಐವರು ಸಾವನ್ನಪ್ಪಿದ್ದಾರೆ ಮತ್ತು 15 ಮನೆಗಳು ಹಾಗೂ ನಾಲ್ಕು ಸೇತುವೆಗಳಿಗೆ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಿಶ್ತ್ವಾರ್, ರಿಯಾಸಿ, ರಾಜೌರಿ, ರಾಂಬನ್ ಮತ್ತು ಪೂಂಚ್ ಜಿಲ್ಲೆಗಳ ಎತ್ತರದ ಪ್ರದೇಶಗಳಲ್ಲಿ ಸಾರ್ವಜನಿಕ ಮತ್ತು ಖಾಸಗಿ ಮೂಲಸೌಕರ್ಯಗಳಿಗೆ ಹಾನಿಯಾಗಿರುವ ವರದಿಗಳು ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿಗಷ್ಟೇ ಹವಾಮಾನ ಇಲಾಖೆಯು (IMD ಕಥುವಾ, ಸಾಂಬಾ, ದೋಡಾ, ಜಮ್ಮು, ರಾಂಬನ್ ಮತ್ತು ಕಿಶ್ತ್ವಾರ್ ಜಿಲ್ಲೆಗಳು ಸೇರಿದಂತೆ ಜಮ್ಮುವಿನ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಿತ್ತು. ಅದರ ಬೆನ್ನಲ್ಲೇ ಮೇಘಸ್ಫೋಟ ಸಂಭವಿಸಿದೆ.