ಮುಜಫರ್ ಪುರ್: ಕಳೆದ ಮೇ ತಿಂಗಳಲ್ಲಿ ಪಾಕಿಸ್ತಾನದೊಂದಿಗಿನ ಮಿಲಿಟರಿ ಸಂಘರ್ಷವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೇಳಿಕೊಂಡ ಕೇವಲ 5 ಗಂಟೆಗಳಲ್ಲಿ ಪ್ರಧಾನಿ ಮೋದಿ ನಿಲ್ಲಿಸಲು ಒಪ್ಪಿಕೊಂಡರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಟೀಕಿಸಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ಬಿಹಾರದ ಮುಜಫರ್ ಪುರ್ ಜಿಲ್ಲೆಯಲ್ಲಿ ನಡೆದ ಸಮಾವೇಶದಲ್ಲಿ ಇಂದು ಮಾತನಾಡಿದರು. ಬಿಹಾರದಲ್ಲಿ ರಾಹುಲ್ ಗಾಂಧಿಯವರು ರಾಜ್ಯವ್ಯಾಪಿ ಮತದಾರ ಅಧಿಕಾರ ಯಾತ್ರೆ ನಡೆಸುತ್ತಿದ್ದು, ಇಂದು ಇಂಡಿಯಾ ಬ್ಲಾಕ್ ಪಾಲುದಾರ ಪಕ್ಷಗಳಾದ ಡಿಎಂಕೆಯ ಎಂ ಕೆ ಸ್ಟಾಲಿನ್ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಕೂಡ ಭಾಗಿಯಾಗಿದ್ದರು.
ಡೊನಾಲ್ಡ್ ಟ್ರಂಪ್ ಇಂದು ಏನು ಹೇಳಿದ್ದಾರೆ? ಪಾಕಿಸ್ತಾನದೊಂದಿಗಿನ ಉದ್ವಿಗ್ನತೆಯ ಸಂದರ್ಭದಲ್ಲಿ ಅವರು ಮೋದಿಗೆ ಕರೆ ಮಾಡಿ 24 ಗಂಟೆಗಳಲ್ಲಿ ಹೋರಾಟವನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಮೋದಿ ತಕ್ಷಣ ಅವರು ಹೇಳಿದಂತೆ ಕೇಳಿದರು. ಟ್ರಂಪ್ ನಿರ್ದೇಶನವನ್ನು ಕೇವಲ 5 ಗಂಟೆಗಳಲ್ಲಿ ಪಾಲಿಸಿದ್ದರು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಟ್ರಂಪ್ ಅವರ ವೀಡಿಯೊವನ್ನು ಉಲ್ಲೇಖಿಸಿ, ಅದರಲ್ಲಿ ಅವರು ಶ್ವೇತಭವನದಲ್ಲಿ ಕ್ಯಾಬಿನೆಟ್ ಸಭೆಯನ್ನು ಉದ್ದೇಶಿಸಿ ಮಾತನಾಡುವುದನ್ನು ಕಾಣಬಹುದು. ಪರಮಾಣು ಶಕ್ತಿ ರಾಷ್ಟ್ರಗಳಾದ ಭಾರತ ಮತ್ತು ಪಾಕಿಸ್ತಾನ ನಡುವಿನ ಬಿಕ್ಕಟ್ಟನ್ನು ತಮ್ಮ ಮಧ್ಯಸ್ಥಿಕೆಯ ಮೂಲಕ ನಿಲ್ಲಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷರು ಒತ್ತಾಯಿಸುತ್ತಿದ್ದಾರೆ,
ಆದರೆ ವಿದೇಶಾಂಗ ಇಲಾಖೆ ಅಮೆರಿಕ ಅಧ್ಯಕ್ಷರ ಹೇಳಿಕೆಯನ್ನು ನಿರಾಕರಿಸಿತ್ತು. ಭಾರತ ಮತ್ತು ಪಾಕಿಸ್ತಾನ ತಮ್ಮ ಮಿಲಿಟರಿಗಳ ನಡುವಿನ ನೇರ ಮಾತುಕತೆಯ ನಂತರ ಮೇ ತಿಂಗಳಲ್ಲಿ ತಮ್ಮ ಮಿಲಿಟರಿ ಕ್ರಮಗಳನ್ನು ನಿಲ್ಲಿಸಿವೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿತು.
ಟ್ರಂಪ್ ಹೇಳಿದ್ದನ್ನು ಮಾಧ್ಯಮಗಳು ನಿಮಗೆ ತೋರಿಸುವುದಿಲ್ಲ ಏಕೆಂದರೆ ಅದು ಮೋದಿ ಮತ್ತು ಅವರ ಸ್ನೇಹಪರ ವ್ಯವಹಾರ ಉದ್ಯಮಿಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತದೆ. ನನ್ನಂತಹ ಸ್ಟಾಲಿನ್ ಅಥವಾ ತೇಜಸ್ವಿಯವರಂತಹ ಜನರ ಬಗ್ಗೆ ಅಲ್ಲ ಎಂದು ಇಂದು ರಾಹುಲ್ ಗಾಂಧಿ ತಮ್ಮ ಮಾತಿನಲ್ಲಿ ಮಾಧ್ಯಮಗಳನ್ನು ಸಹ ದೂಷಿಸಿದರು.