ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಂಘದ ಪಾತ್ರವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ(ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್, ಸಮನ್ವಯದಲ್ಲಿ "ಭಿನ್ನಾಭಿಪ್ರಾಯಗಳು" ಇದ್ದರೂ, ಎರಡರ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ಗುರುವಾರ ಒತ್ತಿ ಹೇಳಿದರು.
ಇಂದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 'ಆರ್‌ಎಸ್‌ಎಸ್ ಶತಮಾನೋತ್ಸವ ಉಪನ್ಯಾಸ ಸರಣಿ'ಯಲ್ಲಿ ಮಾತನಾಡಿದ ಭಾಗವತ್, ಸಂಘ ಮತ್ತು ಸರ್ಕಾರ, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಉತ್ತಮ ಸಮನ್ವಯವನ್ನು ಕಾಯ್ದುಕೊಳ್ಳುತ್ತಿವೆ ಎಂದು ಹೇಳಿದರು.
ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯಗಳು ಇರುತ್ತವೆ ಎಂದು ಒಪ್ಪಿಕೊಂಡ ಅವರು, ಹೋರಾಟಗಳು ಉದ್ಭವಿಸಬಹುದು ಎಂದು ಹೇಳಿದರು. ಆದರೆ ಇವುಗಳನ್ನು ಸಂಘರ್ಷಗಳಾಗಿ ನೋಡಬಾರದು ಎಂದು ಒತ್ತಾಯಿಸಿದರು.
ಬಿಜೆಪಿ, ಆರ್‌ಎಸ್‌ಎಸ್ ನಿರ್ದೇಶನಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬ ವಿರೋಧ ಪಕ್ಷಗಳ ಆರೋಪವನ್ನು ತಿರಸ್ಕರಿಸಿದ ಭಾಗವತ್, ಸಂಘ "ಸಲಹೆಗಳನ್ನು ಮಾತ್ರ ನೀಡುತ್ತದೆ". ಆದರೆ ಸರ್ಕಾರಿ ವ್ಯವಹಾರಗಳಲ್ಲಿ ಎಂದಿಗೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಪ್ರತಿಪಾದಿಸಿದರು.
ನಿರ್ಧಾರ ತೆಗೆದುಕೊಳ್ಳುವುದು ಪಕ್ಷದ ವಿಶೇಷ ಹಕ್ಕು ಎಂದು ಒತ್ತಿ ಹೇಳಿದ ಅವರು, "ಅವರು ದೇಶವನ್ನು ನಡೆಸುವಲ್ಲಿ ತಜ್ಞರು, ನಾವು ಅಲ್ಲ" ಎಂದು ಹೇಳಿದರು.
ಇನ್ನೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ (BJP National President) ಆಯ್ಕೆ ಬಗ್ಗೆ ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ಆರ್‌ಎಸ್‌ಎಸ್ ಎಲ್ಲವನ್ನೂ ನಿರ್ಧರಿಸುತ್ತದೆ ಅನ್ನೋದು ತಪ್ಪು. ಎಲ್ಲವನ್ನೂ ನಿಯಂತ್ರಿಸಲು ಸಾಧ್ಯವಿಲ್ಲ. ಆದ್ರೆ ನಾವು ಪರಸ್ಪರ ಸಲಹೆಗಳನ್ನಷ್ಟೇ ನೀಡಬಹುದು ಎಂದು ಹೇಳಿದರು.
ಪ್ರಸ್ತುತ ಸರ್ಕಾರ ಮಾತ್ರವಲ್ಲ, ಪ್ರತಿಯೊಂದು ಸರ್ಕಾರದೊಂದಿಗೆ ನಮಗೆ ಉತ್ತಮ ಸಮನ್ವಯವಿದೆ ಎಲ್ಲಿಯೂ ಯಾವುದೇ ಜಗಳವಿಲ್ಲ ಎಂದರು. ಸಂಘವು ಬಿಜೆಪಿ ಹೊರತುಪಡಿಸಿ ಬೇರೆ ರಾಜಕೀಯ ಪಕ್ಷಗಳನ್ನು ಏಕೆ ಬೆಂಬಲಿಸುವುದಿಲ್ಲವೇ? ಎಂಬ ಪ್ರಶ್ನೆಗೆ ಉತ್ತರಿಸಿ, ಒಳ್ಳೆಯ ಕೆಲಸಕ್ಕಾಗಿ ನಮ್ಮಿಂದ ಸಹಾಯ ಕೇಳುವವರಿಗೆ ನಾವು ಸಹಾಯ ಮಾಡುತ್ತೇವೆ. ಓಡಿಹೋದವರಿಗೆ ಸಹಾಯ ಸಿಗುವುದಿಲ್ಲ ಎಂದರಲ್ಲದೇ ನಾವು ಪ್ರತಿಯೊಂದು ಸರ್ಕಾರದೊಂದಿಗೆ ಅಂದ್ರೆ ಕೇಂದ್ರ, ರಾಜ್ಯ ಸರ್ಕಾರಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇವೆ, ಆದರೆ ಕೆಲವು ವ್ಯವಸ್ಥೆಗಳು ಕೆಲವು ಆಂತರಿಕ ವಿರೋಧಾಭಾಸ ಹೊಂದಿವೆ ಎಂದರು.