ಮುಂಬೈ: ಮಹಾರಾಷ್ಟ್ರದ ಪಾಲ್ವಾರ್ ಜಿಲ್ಲೆಯ ವಿರಾರ್ ಪ್ರದೇಶದಲ್ಲಿರುವ ರಮಾಬಾಯಿ ಅಪಾರ್ಟ್ ಮೆಂಟ್ ಕಟ್ಟಡ ಕುಸಿದು ಬಿದ್ದ ಪರಿಣಾಮ ಸಾವನ್ನಪ್ಪಿದವರ ಸಂಖ್ಯೆ 17ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಹಲವರು ಅವಶೇಷಗಳಡಿ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎನ್ಡಿಆರ್ಎಫ್ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಗೋಡೆ ಕೆಳಗೆ ಸಿಲುಕಿಕೊಂಡ ಇಬ್ಬರನ್ನು ರಕ್ಷಿಸಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ನಾಲ್ಕನೇ ಮಹಡಿಯಲ್ಲಿ ಒಂದು ವರ್ಷದ ಬಾಲಕಿಯ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿದ್ದಾಗ, ಕಟ್ಟಡದ ಒಂದು ಭಾಗದಲ್ಲಿದ್ದ 12 ಫ್ಲಾಟ್‌ಗಳು ಕುಸಿದು ಬಿದ್ದಿದ್ದು, ನಿವಾಸಿಗಳು ಮತ್ತು ಅತಿಥಿಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಸಂಭವಿಸಿದಾಗ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದ ಹುಡುಗಿಯೂ ಮೃತಳಾಗಿದ್ದಾಳೆ.
ಏಕಾಏಕಿ ಕಟ್ಟಡ ಕುಸಿತದಿಂದಾಗಿ, ಹಲವಾರು ಕುಟುಂಬಗಳು ನಿರಾಶ್ರಿತರಾಗಿದ್ದಾರೆ, ಅವರೆಲ್ಲರನ್ನೂ ಚಂದನ್ಸರ್ ಸಮಾಜಮಂದಿರಕ್ಕೆ ಸ್ಥಳಾಂತರಿಸಲಾಗಿದೆ ಮತ್ತು ಆಹಾರ, ನೀರು ಮತ್ತು ವೈದ್ಯಕೀಯ ನೆರವು ಒದಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಹಲವರ ಶವವನ್ನು ಹೊರ ತೆಗೆಯಲಾಗುತ್ತಿದೆ. ಅಪಘಾತದ ಸ್ಥಳದಲ್ಲಿ ಒಟ್ಟು 50 ಫ್ಲಾಟ್‌ಗಳಿದ್ದು, ಕುಸಿದ ಭಾಗದಲ್ಲಿ 12 ಅಪಾರ್ಟ್‌ಮೆಂಟ್‌ಗಳಿವೆ. ಪಕ್ಕದ ವಸತಿ ಕಟ್ಟಡಗಳಲ್ಲಿನ ಹತ್ತಿರದ ನಿವಾಸಿಗಳನ್ನು ಮುನ್ನೆಚ್ಚರಿಕೆಯಾಗಿ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿವಿಎಂಸಿ ದೂರು ದಾಖಲಿಸಿದ ನಂತರ ಪೊಲೀಸರು ಬಿಲ್ಡರ್ ನಿತಲ್ ಗೋಪಿನಾಥ್ ಸಾನೆ ಅವರನ್ನು ಬಂಧಿಸಿದ್ದಾರೆ. ಭೂಮಾಲೀಕರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.