ಭುವನೇಶ್ವರ: ಮಹಿಳೆಯೊಬ್ಬರನ್ನು ಅಪಹರಿಸಿ ಬರೊಬ್ಬರಿ 6 ತಿಂಗಳ ಕಾಲ ಒತ್ತೆಯಲ್ಲಿಟ್ಟುಕೊಂಡು ಸಾಮೂಹಿಕ ಅತ್ಯಾಚಾರ ನಡೆಸಿರುವ ಭೀಕರ ಘಟನೆ ವರದಿಯಾಗಿದೆ.
ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ 23 ವರ್ಷದ ಮಹಿಳೆಯನ್ನು ಸ್ಥಳೀಯ ವ್ಯಕ್ತಿಯೊಬ್ಬ ಅಪಹರಿಸಿ, ಕಳೆದ ಆರು ತಿಂಗಳಿನಿಂದ ಹಲವಾರು ವ್ಯಕ್ತಿಗಳೊಂದಿಗೆ ಸೇರಿ ಅತ್ಯಾಚಾರ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಯೂರ್ಭಂಜ್ ಜಿಲ್ಲೆಯ ಬರಿಪಾದದಲ್ಲಿ ಕಳೆದ ಆರು ತಿಂಗಳಿನಿಂದ ತನ್ನನ್ನು ಅಪಹರಿಸಿ ಇರಿಸಲಾಗಿದ್ದು, ಈ ಸಮಯದಲ್ಲಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ದೈಹಿಕ ಹಿಂಸೆ ನೀಡಲಾಗಿದೆ ಎಂದು ಆರೋಪಿಸಿ ಸಂತ್ರಸ್ತೆ ಪೊಲೀಸ್ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ತಾನು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ಮಹಿಳೆ ಹೇಳಿದ್ದು, ಭೋಗ್ರೈ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ಬಯಲಾಗಿದ್ದೇ ರೋಚಕ!
ಸಂತ್ರಸ್ಥ ಮಹಿಳೆಯ ತಾಯಿ ಹೇಳಿರುವಂತೆ 23 ವರ್ಷದ ಸಂತ್ರಸ್ಥ ಮಹಿಳೆ ಆರೋಪಿ ವ್ಯಕ್ತಿಯೊಂದಿಗೆ ಓಡಿ ಹೋಗಿದ್ದಳು. ತನ್ನದೊಂದಿಗೆ ಮನೆಯಲ್ಲಿದ್ದ ಸುಮಾರು 3 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳನ್ನೂ ಹೊತ್ತೊಯ್ದಿದ್ದಳು. ಈ ಸಂಬಂಧ ತಾವು ಮಾರ್ಚ್ 3ರಂದು ಪೊಲೀಸ್ ದೂರು ದಾಖಲಿಸಿದ್ದಾಗಿ ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಭೋಗ್ರೈ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್-ಇನ್‌ಚಾರ್ಜ್ ರೋಹಿತ್ ಕುಮಾರ್ ಬಾಲ್, ಮಹಿಳೆಯ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಪ್ರಸ್ತುತ ಸಂತ್ರಸ್ಥ ಮಹಿಳೆಯನ್ನು ಬಾಲಸೋರ್‌ನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದ್ದು, ಬುಧವಾರ ಆಕೆಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಅಂತೆಯೇ ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ.