ಕೊಲ್ಕತ್ತಾ: ದೇಶವನ್ನು ಒಳನುಸುಳುಕೋರರಿಂದ ರಕ್ಷಿಸಲು ಸಾಧ್ಯವಾಗದಿದ್ದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು ಎಂದು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಶ್ಚಿಮ ಬಂಗಾಳ ಬಿಜೆಪಿ, ಟಿಎಂಸಿ ಸಂಸದೆಯ ವಿಡಿಯೋವನ್ನು ಹಂಚಿಕೊಂಡಿದ್ದು, "ಗೃಹ ಸಚಿವರ ಶಿರಚ್ಛೇದನದ ಬಗ್ಗೆ ಮಹುವಾ ಮಾತನಾಡುತ್ತಿರುವುದು ಟಿಎಂಸಿಯ ಹತಾಶೆಯನ್ನು ತೋರಿಸುತ್ತಿದೆ ಮತ್ತು ಬಂಗಾಳದ ಪ್ರತಿಷ್ಠೆಯನ್ನು ಹಾಳು ಮಾಡುತ್ತಿದ್ದಾರೆ" ಎಂದು ಟೀಕಿಸಿದೆ.
ವಿಡಿಯೋದಲ್ಲಿ, ಮಹುವಾ ಅವರು ಬಂಗಾಳಿ ಭಾಷೆಯಲ್ಲಿ ಮಾತನಾಡಿದ್ದು, "ನಮ್ಮ ಗಡಿಗಳನ್ನು ರಕ್ಷಿಸಲು ಯಾರೂ ಇಲ್ಲವೇ? ಇತರ ದೇಶಗಳ ಜನ ಪ್ರತಿದಿನ ನೂರಾರು, ಸಾವಿರಾರು ಮತ್ತು ಲಕ್ಷಗಳಲ್ಲಿ ಒಳ ನುಸುಳುತ್ತಿದ್ದಾರೆ ಮತ್ತು ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲೆ ಕಣ್ಣಿಟ್ಟು, ನಮ್ಮ ಭೂಮಿಯನ್ನು ಕಸಿದುಕೊಳ್ಳುತ್ತಿದ್ದರೆ, ಮೊದಲು ನೀವು ಅಮಿತ್ ಶಾ ಅವರ ತಲೆಯನ್ನು ಕತ್ತರಿಸಿ ಮೇಜಿನ ಮೇಲೆ ಇಡಬೇಕು ಎಂದು ನಾಲಿಗೆ ಹರಿಬಿಟ್ಟಿದ್ದಾರೆ.
ಕೇಂದ್ರ ಗೃಹ ಸಚಿವರು ಮತ್ತು ಗೃಹ ಸಚಿವಾಲಯವು ಭಾರತದ ಗಡಿಗಳನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ಮತ್ತು ಹೊರಗಿನಿಂದ ಬಂದ ಜನರು ನಮ್ಮ ತಾಯಂದಿರು ಮತ್ತು ಸಹೋದರಿಯರ ಮೇಲೆ ಕಣ್ಣಿಟ್ಟು ನಮ್ಮ ಭೂಮಿಯನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಪ್ರಧಾನಿಯೇ ಹೇಳುತ್ತಿದ್ದರೆ, ಇದು ಯಾರ ತಪ್ಪು? ಇದು ನಮ್ಮ ತಪ್ಪೋ ಅಥವಾ ನಿಮ್ಮ ತಪ್ಪೋ? ಇಲ್ಲಿ ಬಿಎಸ್‌ಎಫ್ ಇದೆ. ನಾವು ಕೂಡ ಅವರ ಭಯದಲ್ಲಿ ಬದುಕುತ್ತೇವೆ ಎಂದು ಟಿಸಿಎಂ ಸಂಸದೆ ಹೇಳಿದ್ದಾರೆ.
ಟಿಎಂಸಿ ಸಂಸದೆಯ ಈ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಟಿಎಂಸಿ ತನ್ನ ಹಿಂಸಾತ್ಮಕ ಮನಸ್ಥಿತಿಯೊಂದಿಗೆ ಬಂಗಾಳವನ್ನು ಅಭಿವೃದ್ಧಿಪಡಿಸಲು ಬಿಡುತ್ತಿಲ್ಲ ಎಂಬುದಕ್ಕೆ ಈ ಹೇಳಿಕೆ ಪುರಾವೆಯಾಗಿದೆ ಎಂದು ತಿರುಗೇಟು ನೀಡಿದೆ. ಅಲ್ಲದೆ ಈ ಹೇಳಿಕೆಗೆ ಸಂಬಂಧಿಸಿದಂತೆ ಬಿಜೆಪಿ, ನಾಡಿಯಾ ಜಿಲ್ಲೆಯ ಕೃಷ್ಣನಗರದ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಮಹುವಾ ಮೊಯಿತ್ರಾ ವಿರುದ್ಧ ದೂರು ದಾಖಲಿಸಿದೆ.