ನವದೆಹಲಿ: ಬರ್ತ್‌ಡೇ ಗಿಫ್ಟ್ ವಿಚಾರಕ್ಕೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಅತ್ತೆಯನ್ನು ಹತ್ಯೆ ಮಾಡಿರುವ ಘಟನೆ ದೆಹಲಿಯ ರೋಹಿಣಿಯಲ್ಲಿ ನಡೆದಿದೆ.
ಕುಸುಮ್ ಸಿನ್ಹಾ (63) ಮತ್ತು ಅವರ ಮಗಳು ಪ್ರಿಯಾ ಸೆಹಗಲ್ (34) ಹತ್ಯೆಯಾದವರು. ಯೋಗೇಶ್ ಎಂಬ ವ್ಯಕ್ತಿ ಕೊಂದಿದ್ದಾನೆ. ಕುಸುಮ್ ಅವರ ಮಗ ಮೇಘ ಸಿನ್ಹಾ (30) ಪೊಲೀಸರಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದ. ಸ್ಥಳಕ್ಕಾಗಮಿಸಿದ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ಆ.28 ರಂದು ಮೊಮ್ಮಗ ಚಿರಾಗ್‌ನ ಹುಟ್ಟುಹಬ್ಬವನ್ನು ಆಚರಿಸಲು ಮಗಳು ಪ್ರಿಯಾ ಮನೆಗೆ ಕುಸುಮ್ ಬಂದಿದ್ದಾರೆ. ಸಮಾರಂಭದ ಸಮಯದಲ್ಲಿ ಉಡುಗೊರೆಗಳ ವಿಷಯದಲ್ಲಿ ಪ್ರಿಯಾ ಮತ್ತು ಆಕೆಯ ಪತಿ ಯೋಗೇಶ್ ನಡುವೆ ಜಗಳ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಕುಸುಮ್ ಅಲ್ಲೇ ಉಳಿದಿದ್ದರು.
ಆ.30 ರಂದು ಮೇಘ ತನ್ನ ತಾಯಿ ಕುಸುಮ್‌ಗೆ ಕರೆ ಮಾಡಿದ್ದಾರೆ. ಆದರೆ, ತಾಯಿ ಕರೆ ಸ್ವೀಕರಿಸಿಲ್ಲ. ಆಗ ಪ್ರಿಯಾಳ ಮನೆಗೆ ಬಂದಿದ್ದಾನೆ. ಮನೆಯಲ್ಲಿ ಯಾರೂ ಇರಲಿಲ್ಲ. ಬಾಗಿಲಿನ ಬಳಿ ರಕ್ತದ ಕಲೆ ಇರುವುದನ್ನು ಕಂಡಿದ್ದಾನೆ.
ನಂತರ ಬೀಗ ಒಡೆದಾಗ, ಕೋಣೆಯೊಳಗೆ ತನ್ನ ತಾಯಿ ಮತ್ತು ಸಹೋದರಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡಿದ್ದಾನೆ. ಪ್ರಿಯಾಳ ಪತಿ ಯೋಗೇಶ್ ಸೆಹಗಲ್, ನನ್ನ ತಾಯಿ ಮತ್ತು ಸಹೋದರಿ ಇಬ್ಬರನ್ನೂ ಕೊಂದು ಮಕ್ಕಳೊಂದಿಗೆ ಪರಾರಿಯಾಗಿದ್ದಾನೆ ಎಂದು ಮೇಘ ಆರೋಪಿಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಯೋಗೇಶ್‌ನನ್ನು ಕೆಎನ್ ಕೆ ಮಾರ್ಗ್ ಪೊಲೀಸರು ಬಂಧಿಸಿದ್ದು, ಆತನ ರಕ್ತದ ಕಲೆಗಳಿರುವ ಬಟ್ಟೆಗಳು ಮತ್ತು ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಕತ್ತರಿಗಳನ್ನು ಘಟನಾ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ. ಕೌಟುಂಬಿಕ ಕಲಹಕ್ಕೆ ಕೊಲೆ ನಡೆದಿದೆ ಎನ್ನಲಾಗಿದೆ.