ಮುಂಬೈ: ಫಾರ್ಮಾ ಕಂಪನಿಯ ಬಾಸ್ ಒಬ್ಬರು, ಗನ್ ಪಾಯಿಂಟ್ ನಲ್ಲಿ ಮಹಿಳಾ ಉದ್ಯಮಿಯನ್ನು ಬೆತ್ತಲೆಗೊಳಿಸಿ ರೆಕಾರ್ಡ್ ಮಾಡಿರುವ ಘಟನೆ ವಾಣಿಜ್ಯ ರಾಜಧಾನಿ ಮುಂಬೈಯಲ್ಲಿ ನಡೆದಿದೆ. ಅಲ್ಲದೇ ಈ ವಿಷಯನ್ನು ಯಾರಿಗಾದರೂ ಹೇಳಿದರೆ ಬೆತ್ತಲೆ ಫೋಟೋಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಸಂಬಂಧ ಮಹಿಳೆ ಫ್ರಾಂಕೋ-ಇಂಡಿಯನ್ ಫಾರ್ಮಾಸ್ಯುಟಿಕಲ್ಸ್‌ನ ವ್ಯವಸ್ಥಾಪಕ ನಿರ್ದೇಶಕರು ಮತ್ತು ಸ್ಥಾಪಕ ಸದಸ್ಯರಾದ ಜಾಯ್ ಜಾನ್ ಪ್ಯಾಸ್ಕಲ್ ಪೋಸ್ಟ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಪ್ರಕಾರ, ಸಭೆಯ ನೆಪದಲ್ಲಿ 51 ವರ್ಷದ ಮಹಿಳಾ ಉದ್ಯಮಿಯನ್ನು ಜಾಯ್ ಜಾನ್ ಪ್ಯಾಸ್ಕಲ್ ಪೋಸ್ಟ್ ಫ್ರಾಂಕೋ-ಇಂಡಿಯನ್ ಫಾರ್ಮಾಸ್ಯುಟಿಕಲ್ಸ್ (FIPPL) ಕಚೇರಿಗೆ ಆಹ್ವಾನಿಸಿದ್ದಾರೆ. ಅಲ್ಲಿ ಆಕೆಗೆ ಕಿರುಕುಳ ನೀಡಲಾಗಿದ್ದು, ಗನ್ ಪಾಯಿಂಟ್ ನಲ್ಲಿ ಬಟ್ಟೆ ಬಿಚ್ಚಿಸಲಾಗಿದೆ.
ಬಳಿಕ ಆರೋಪಿ, ಆಕೆಯ ನಗ್ನ ವೀಡಿಯೊಗಳು ಮತ್ತು ಫೋಟೋಗಳನ್ನು ರೆಕಾರ್ಡ್ ಮಾಡಿದ್ದು, ಈ ಬಗ್ಗೆ ಯಾರಿಗಾದರೂ ತಿಳಿಸಿದರೆ ಅವುಗಳನ್ನು ಬಹಿರಂಗ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.
ಮಹಿಳೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದು, ಪೋಸ್ಟ್ ಮತ್ತಿತರ ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿ ವಿರುದ್ಧ ಲೈಂಗಿಕ ಕಿರುಕುಳ, ಹಲ್ಲೆ ಮತ್ತು ಕ್ರಿಮಿನಲ್ ಬೆದರಿಕೆ ಆರೋಪ ಮಾಡಲಾಗಿದೆ.
ಪೊಲೀಸರು ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.