ಕೊಯಮತ್ತೂರು: ನಗರದ ಖಾಸಗಿ ಮಹಿಳಾ ಹಾಸ್ಟೆಲ್‌ನಲ್ಲಿ ಭಾನುವಾರ ಬೆಳಿಗ್ಗೆ 28 ವರ್ಷದ ಮಹಿಳೆಯನ್ನು ಆಕೆಯ ಪತಿಯೇ ಕಡಿದು ಕೊಂದಿದ್ದು, ಮೃತದೇಹದೊಂದಿಗೆ ಸೆಲ್ಫಿ ತೆಗೆದುಕೊಂಡು ವಾಟ್ಸಾಪ್ ಸ್ಟೇಟಸ್ ಹಾಕಿರುವ ವಿಚಿತ್ರ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ತಿರುನಲ್ವೇಲಿ ಜಿಲ್ಲೆಯ ಮೇಳಪಾಳಯಂ ಬಳಿಯ ತರುವಾಯಿ ನಿವಾಸಿ ಬಿ ಶ್ರೀಪ್ರಿಯಾ (28) ಎಂದು ಗುರುತಿಸಲಾಗಿದೆ. ಆಕೆಯ ಪರಿತ್ಯಕ್ತ ಪತಿ ಎಸ್ ಬಾಲಮುರುಗನ್ (32) ಆಕೆಯ ಶವದೊಂದಿಗೆ ಸೆಲ್ಫಿ ತೆಗೆದುಕೊಂಡು, ಆ ಫೋಟೋವನ್ನು ತನ್ನ ವಾಟ್ಸಾಪ್ ಸ್ಟೇಟಸ್ ಆಗಿ ಪೋಸ್ಟ್ ಮಾಡಿ, ಆಕೆ ತನಗೆ ದ್ರೋಹ ಬಗೆದಿದ್ದಾಳೆ ಎಂದು ಹೇಳಿಕೊಂಡಿದ್ದಾನೆ.
ಬಾಲಮುರುಗನ್ ಮಹಿಳೆ ಮೇಲೆ ಹಲ್ಲೆ ನಡೆಸಿದಾಗ ಭಯಭೀತಗೊಂಡ ಇತರ ಮಹಿಳೆಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದಾಗ ಬಾಲಮುರುಗನ್ ಸ್ಥಳದಲ್ಲಿಯೇ ಅವರಿಗಾಗಿ ಕಾಯುತ್ತಿದ್ದನು ಎಂದು ರಥಿನಪುರಿ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ವೈವಾಹಿಕ ಕಲಹಗಳಿಂದಾಗಿ, ಕಳೆದ ವರ್ಷ ಶ್ರೀಪ್ರಿಯಾ ಮತ್ತು ಬಾಲಮುರುಗನ್ ಬೇರೆಯಾಗಿದ್ದರು. ಬಳಿಕ ತಿರುನಲ್ವೇಲಿಯಿಂದ ಕೊಯಮತ್ತೂರಿನ ಗಣಪತಿಯಲ್ಲಿರುವ ತನ್ನ ತಾಯಿಯ ಮನೆಗೆ ತಮ್ಮ ಇಬ್ಬರು ಮಕ್ಕಳೊಂದಿಗೆ ಸ್ಥಳಾಂತರಗೊಂಡಿದ್ದರು.
ತಾಯಿಯೊಂದಿಗಿನ ಭಿನ್ನಾಭಿಪ್ರಾಯದ ನಂತರ, ಶ್ರೀಪ್ರಿಯಾ ತನ್ನ ಮಕ್ಕಳನ್ನು ತನ್ನ ತಾಯಿಯೊಂದಿಗೆ ಬಿಟ್ಟು ಗಾಂಧಿಪುರಂ ಬಳಿಯ ಖಾಸಗಿ ಮಹಿಳಾ ಹಾಸ್ಟೆಲ್‌ಗೆ ತೆರಳಿದ್ದರು. ಅವರು ನಗರದ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅವರು ಹೇಳಿದರು.
ಶ್ರೀಪ್ರಿಯಾ ತನ್ನ ಸಂಬಂಧಿಕರೊಬ್ಬರೊಂದಿಗೆ ಸಂಬಂಧ ಹೊಂದಿದ್ದಾಳೆಂದು ಬಾಲಮುರುಗನ್ ಆರೋಪಿಸಿ ಫೋನ್ ಮೂಲಕ ಜಗಳವಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ ಕೊಯಮತ್ತೂರಿಗೆ ಆಗಮಿಸಿದ ಆತ, ಶ್ರೀಪ್ರಿಯಾಳನ್ನು ಭೇಟಿಯಾಗಲು ಹಾಸ್ಟೆಲ್‌ಗೆ ಕುಡುಗೋಲು ಹಿಡಿದು ಹೋಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವೇಟಿಂಗ್ ರೂಂನಲ್ಲಿ ಬಾಲಮುರುಗನ್ ತನ್ನ ಪತ್ನಿಯನ್ನು ಭೇಟಿಯಾದಾಗ, ಅವರ ನಡುವೆ ಜಗಳವಾಗಿದೆ. ಬಳಿಕ ಆತ ಕುಡುಗೋಲು ಹೊರತೆಗೆದು ಶ್ರೀಪ್ರಿಯಾಳನ್ನು ಕೊಂದಿದ್ದಾನೆ ಎಂದು ಅವರು ಹೇಳಿದರು.
ರಥಿನಪುರಿ ಪೊಲೀಸರು ಶ್ರೀಪ್ರಿಯಾ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕಳುಹಿಸಿದ್ದಾರೆ. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.