ನವದೆಹಲಿ: ಪ್ರವಾಹ ಪೀಡಿತ ಶ್ರೀಲಂಕಾಗೆ ನೆರವು ನೀಡಲು ತನ್ನ ವಾಯುಪ್ರದೇಶ ಬಳಸಲು ಭಾರತ ಅನುಮತಿ ನೀಡಿಲ್ಲ ಎಂದು ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಈ ವರದಿಗಳೆಲ್ಲಾ ಸುಳ್ಳು ಎಂದು ಭಾರತ ತಳ್ಳಿಹಾಕಿದೆ.
ಪಾಕಿಸ್ತಾನವು ಡಿಸೆಂಬರ್ 1 ರಂದು ಮಧ್ಯಾಹ್ನ 1 ಗಂಟೆಗೆ (IST) ಭಾರತೀಯ ವಾಯುಪ್ರದೇಶದ ಮೇಲೆ ಹಾರಲು ಅನುಮತಿ ಕೋರಿ ತನ್ನ ಔಪಚಾರಿಕ ವಿನಂತಿಯನ್ನು ಸಲ್ಲಿಸಿತು.
ಶ್ರೀಲಂಕಾಕ್ಕೆ ಮಾನವೀಯ ನೆರವಿಗೆ ಸಂಬಂಧಿಸಿದ ವಿನಂತಿಯನ್ನು ಪರಿಗಣಿಸಿ, ಭಾರತ ಸರ್ಕಾರ ನಿನ್ನೆ ಸಂಜೆ 5 ಗಂಟೆಗೆ (IST) ವಿನಂತಿಯನ್ನು ಒಪ್ಪಿಕೊಂಡಿತ್ತು ಎಂದು ಭಾರತದ ಅಧಿಕಾರಿಗಳು ಹೇಳಿದ್ದಾರೆ.
ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಪಾಕಿಸ್ತಾನ ತನ್ನ ವಾಯುಪ್ರದೇಶವನ್ನು ನಿಷೇಧಿಸಿದ್ದರೂ ಸಂಪೂರ್ಣವಾಗಿ ಮಾನವೀಯ ಆಧಾರದ ಮೇಲೆ ಮನವಿಯನ್ನು ಪರಿಗಣಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನ ಮಾಧ್ಯಮಗಳು ಎಂದಿನಂತೆ ಪ್ರಚಾರದಲ್ಲಿ ತೊಡಗಿದ್ದು, ಸುಳ್ಳು ಸುದ್ದಿಗಳನ್ನು ಹರಡುತ್ತಿವೆ. ಈ ಆರೋಪಗಳು ಆಧಾರರಹಿತವಾಗಿವೆ ಎಂದು ಅವರು ಟೀಕಿಸಿದ್ದಾರೆ.
ಓವರ್‌ಫ್ಲೈಟ್ ಅಥವಾ ಸಾಗಣೆಗೆ ಸಂಬಂಧಿಸಿದ ಎಲ್ಲಾ ಮನವಿಗಳನ್ನು ನಿಯಮಗಳು ಮತ್ತು ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಪರಿಗಣಿಸಲಾಗಿದೆ ಎಂದು ಅವರು ಹೇಳಿದ್ದಾರೆ.