ಪುಣೆ: 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಇನ್ನೂ ಮುಂದುವರೆದಿದ್ದು, ಸಶಸ್ತ್ರ ಪಡೆಗಳ ನಡುವೆ ಕಾರ್ಯವಿಧಾನದ ಮಾಹಿತಿ ಹಂಚಿಕೆ ಸೇರಿದಂತೆ ಉನ್ನತ ಮಟ್ಟದ ಸಮನ್ವಯತೆಯ ಅಗತ್ಯವಿದೆ ಎಂದು ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕೆ. ತ್ರಿಪಾಠಿ ಹೇಳಿದ್ದಾರೆ.
ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆಪರೇಷನ್ ಸಿಂಧೂರ ಇನ್ನೂ ನಡೆಯುತ್ತಿದೆ. ಅದು ಮುಗಿದಿಲ್ಲ. ಕಾರ್ಯಾಚರಣೆಗೆ ಸಂಬಂಧಿಸಿದಂತೆ ಯಾವುದೇ ರೀತಿಯಲ್ಲಿ ಸಜ್ಜಾಗುವುದು ಉತ್ತಮ ಎಂದಿದ್ದಾರೆ.
ಮೂರು ಪಡೆಗಳ ನಡುವೆ ವಾಯು ರಕ್ಷಣೆಯನ್ನು ಸಂಯೋಜಿಸಲಾಗಿದೆ. ಅದನ್ನು ಆಪರೇಷನ್ ಸಿಂಧೂರ ಸಮಯದಲ್ಲಿಯೂ ಮಾಡಲಾಗಿತ್ತು. ಶತ್ರು ರಾಷ್ಟ್ರದಿಂದ ಯಾವುದೇ ದಾಳಿ ಎದುರಾದರೂ ಅದನ್ನು ಸಮರ್ಥ ರೀತಿಯಲ್ಲಿ ಎದುರಿಸಲು ನೌಕಾಪಡೆಯು ಸಂಪೂರ್ಣವಾಗಿ ಸಜ್ಜಾಗಿದೆ ಎಂದರು.
"ಆಪರೇಷನ್ ಸಿಂಧೂರ' ಕಾರ್ಯಾಚರಣೆ ವೇಳೆಯಲ್ಲಿ ಬಹಳ ಕಡಿಮೆ ಅವಧಿಯಲ್ಲಿ 30 ಕ್ಕೂ ಹೆಚ್ಚು ಹಡಗುಗಳು ಮತ್ತು ಜಲಾಂತರ್ಗಾಮಿ ನೌಕೆಗಳನ್ನು ಅಭೂತಪೂರ್ವವಾಗಿ ಸಜ್ಜುಗೊಳಿಸಲಾಗಿತ್ತು. ಮಕ್ರಾನ್ ಕರಾವಳಿಯಲ್ಲಿ ನಮ್ಮ ಮುಂಚೂಣಿಯ ಹಡಗುಗಳು, ಐಎನ್ಎಸ್ ಜಲಂತರ್ಗಾಮಿ ನೌಕೆ ಯುದ್ಧಕ್ಕೆ ಸಜ್ಜಾಗಿದ್ದವು ಎಂದು ಅವರು ತಿಳಿಸಿದರು.
ಬಲಿಷ್ಠ ಭಾರತೀಯ ನೌಕಾಪಡೆ ಕಂಡು ಭಯಭೀತಿಗೊಂಡಿದ್ದ ಪಾಕಿಸ್ತಾನ ನೌಕಾಪಡೆ ತನ್ನ ಕರಾವಳಿ ಪ್ರದೇಶ ಬಿಟ್ಟು ಬೇರೆ ಕಡೆಗೆ ಕದಲಿರಲಿಲ್ಲ ಎಂದು ತ್ರಿಪಾಠಿ ಮಾಹಿತಿ ನೀಡಿದರು.