ಅನಂತಪುರಂ: ಜನಪ್ರತಿನಿಧಿಗಳ ಕಾಮಪುರಾಣ ಪ್ರಕರಣಗಳ ಸರಣಿ ಹಸಿರಾಗಿರುವಂತೆಯೇ ಅಂತಹುದೇ ಮತ್ತೋರ್ವ ಜನಪ್ರತಿನಿಧಿಯ ಖಾಸಗಿ ವಿಡಿಯೋವೊಂದು ವ್ಯಾಪಕ ವೈರಲ್ ಆಗುತ್ತಿದೆ.
ಈ ಬಾರಿ ಆಂಧ್ರ ಪ್ರದೇಶದ ವೈಸಿಪಿ ಶಾಸಕನ ಖಾಸಗಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಚ್ಚರಿ ಎಂದರೆ ಆ ವಿಡಿಯೋವನ್ನು ಆ ಶಾಸಕನೇ ಹರಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ.
ಇಷ್ಟಕ್ಕೂ ಯಾರೂ ಮಹಾ ಶಾಸಕ ಎಂದರೆ.. ಆಂಧ್ರ ಪ್ರದೇಶದ ಅನಂತಪುರದ ಶಿಂಗನಮಲ ಕ್ಷೇತ್ರದ ವೈಸಿಪಿ ಪಕ್ಷದ ಶಾಸಕ ಫಣೀಂದ್ರ ಎಂದು ಹೇಳಲಾಗಿದೆ. ಈ ಫಣೀಂದ್ರ ವೈಸಿಪಿ ಪಕ್ಷದ ಬಿಸಿ ಸೆಲ್ ಅಧ್ಯಕ್ಷರೂ ಕೂಡ ಆಗಿದ್ದು, ಇದೇ ಶಾಸಕನ ವಿವಾಹೇತರ ಸಂಬಂಧದ ವಿಡಿಯೋವೊಂದು ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಮೂಲಗಳ ಪ್ರಕಾರ ಶಾಸಕ ಫಣೀಂದ್ರ ಶಿಕ್ಷಕಿಯೊಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿದ್ದು, ಇಷ್ಟು ದಿನ ಗುಟ್ಟಾಗಿ ಸಾಗುತ್ತಿದ್ದ ಇವರ ವ್ಯವಹಾರ ಇತ್ತೀಚೆಗೆ ವೈರಲ್ ಆದ ವಿಡಿಯೋ ಮೂಲಕ ಬಟಾಬಯಲಾಗಿತ್ತು. ಇನ್ನೂ ಅಚ್ಚರಿ ಎಂದರೆ ಈ ವಿಡಿಯೋವನ್ನು ಬೇರೆ ಯಾರೋ ಹರಿಬಿಟ್ಟಿದ್ದಾರೆ ಎಂದರೆ ಬೇರೆ.. ಆದರೆ ಈ ವಿಡಿಯೋದಲ್ಲಿರುವ ಶಾಸಕನೇ ಈ ವಿಡಿಯೋವನ್ನು ವಾಟ್ಸಪ್ ನಲ್ಲಿ ಶೇರ್ ಮಾಡಿದ್ದಾನೆ ಎನ್ನಲಾಗಿದೆ.
ಪಕ್ಷದ ಗ್ರೂಪ್ ನಲ್ಲಿ ವಿಡಿಯೋ ಶೇರ್
ಇನ್ನು ಶಾಸಕ ಫಣೀಂದ್ರ ತಮ್ಮ ಖಾಸಗಿ ವಿಡಿಯೋವನ್ನು ವೈಸಿಪಿ ಪಕ್ಷದ ವಾಟ್ಸಪ್ ಗ್ರೂಪ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಫಣೀಂದ್ರ ಯಾವುದೋ ವಿಡಿಯೋ ಶೇರ್ ಮಾಡಲು ಹೋಗಿ ತಮ್ಮ ಖಾಸಗಿ ವಿಡಿಯೋ ಶೇರ್ ಮಾಡಿದ್ದಾರೆ ಎನ್ನಲಾಗಿದೆ.
ಈ ವಿಡಿಯೋ ವೈರಲ್ ಆಗುತ್ತಲೇ ಶಾಸಕ ಫಣೀಂದ್ರ ಕೂಡಲೇ ಅದನ್ನು ಡಿಲೀಟ್ ಮಾಡಿದ್ದಾರೆಯಾದರೂ ಅಷ್ಟು ಹೊತ್ತಿಗಾಗಲೇ ಅದನ್ನು ಗ್ರೂಪ್ ನ ಇತರೆ ಸದಸ್ಯರು ಬೇರೆಯವರಿಗೆ ಫಾರ್ವರ್ಡ್ ಮಾಡಿದ್ದಾರೆ.
ರಾಜಕೀಯ ವಿರೋಧಿಗಳ ಕೃತ್ಯ
ಇನ್ನು ಈ ವಿಡಿಯೋ ವೈರಲ್ ಆಗುತ್ತಲೇ ಈ ಕುರಿತು ಸ್ಪಷ್ಟನೆ ನೀಡಿರುವ ಶಾಸಕ ಫಣೀಂದ್ರ, 'ತನ್ನ ಮೊಬೈಲ್ ಫೋನ್ ಅನ್ನು ಯಾರೋ ಹ್ಯಾಕ್ ಮಾಡಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ' ಎಂದು ಆರೋಪಿಸಿದರು. 'ನಾನು ಎಂದಿಗೂ ಅಂತಹ ವೀಡಿಯೊವನ್ನು ಹಂಚಿಕೊಂಡಿಲ್ಲ. ನನ್ನ ರಾಜಕೀಯ ವಿರೋಧಿಗಳು ಈ ಕೆಲಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಆದಾಗ್ಯೂ ಶಾಸಕ ಫಣೀಂದ್ರ ಈ ವೀಡಿಯೊ ಕೃತಕ ಬುದ್ಧಿಮತ್ತೆ ಅಥವಾ ನಕಲಿ ಎಂದು ಹೇಳಿಲ್ಲ.
ಫಣೀಂದ್ರ ವಿರುದ್ಧ ಸ್ವಪಕ್ಷೀಯರ ಆಕ್ರೋಶ
ಇನ್ನು ಶಾಸಕ ಫಣೀಂದ್ರ ಖಾಸಗಿ ವಿಡಿಯೋ ವೈರಲ್ ಆಗುತ್ತಲೇ ವೈಸಿಪಿ ಪಕ್ಷ ತೀವ್ರ ಮುಜುಗರಕ್ಕೀಡಾಗಿದ್ದು ಸ್ವಪಕ್ಷೀಯರೇ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮೊದಲನೆಯದಾಗಿ ಶಾಸಕ ಫಣೀಂದ್ರ ತಮ್ಮ ಆರೋಪಗಳಿಗೆ ಯಾವುದೇ ಪುರಾವೆಗಳನ್ನು ನೀಡಿಲ್ಲ.. ಮತ್ತೊಂದು ಮೊಬೈಲ್ ಹ್ಯಾಕ್ ಆಗಿದೆ ಎಂದು ಪರಿಗಣಿಸಿದರೂ ಅವರ ಮಹಿಳೆಯೊಂದಿಗೆ ಆತ್ಮೀಯವಾಗಿದ್ದಾಗ ಏಕೆ ವಿಡಿಯೋ ರೆಕಾರ್ಡ್ ಮಾಡಿಕೊಂಡರು ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಲಾಗುತ್ತಿದೆ.
ಹೀಗಾಗಿ ಪಕ್ಷದ ಹೈಕಮಾಂಡ್ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಕೆಲವರು ಒತ್ತಾಯಿಸುತ್ತಿದ್ದಾರೆ. ಈ ಘಟನೆಯ ಬಗ್ಗೆ ವೈಸಿಪಿ ಹೈಕಮಾಂಡ್ ಇನ್ನೂ ಪ್ರತಿಕ್ರಿಯಿಸಿಲ್ಲ. ಇದು ಸಂಪೂರ್ಣವಾಗಿ ಅವರ ಖಾಸಗಿ ವಿಷಯ ಎಂದು ಅದು ಮೊದಲ ಪ್ರತಿಕ್ರಿಯೆ ನೀಡಿದೆ.