ನವದೆಹಲಿ: ದಾಖಲೆಯ 1.17 ಕೋಟಿ ರೂಗೆ ಕಾರಿನ ನಂಬರ್ ಗೆ ಬಿಡ್ ಮಾಡಿದ್ದ ಉದ್ಯಮಿಗೆ ಶಾಕ್ ಎದುರಾಗಿದ್ದು, ಅವರ ಆಸ್ತಿ ಕುರಿತು ಹರ್ಯಾಣ ಸರ್ಕಾರ ತನಿಖೆಗೆ ಆದೇಶಿಸಿದೆ.
ಭಾರತದ ಅತ್ಯಂತ ದುಬಾರಿ ನಂಬರ್ ಪ್ಲೇಟ್ ಎಂದೇ ಹೇಳಲಾಗುತ್ತಿದ್ದ 'HR88B8888' ಗೆ ಬಿಡ್ ಮಾಡಿದ್ದ ಉದ್ಯಮಿ ಸುಧೀರ್ ಕುಮಾರ್ ಅವರ ಆಸ್ತಿ ಮತ್ತು ಆದಾಯವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ಹರ್ಯಾಣ ಸರ್ಕಾರ ಆದೇಶಿಸಿದೆ.
ಹರ್ಯಾಣ ಸಾರಿಗೆ ಸಚಿವ ಅನಿಲ್ ವಿಜ್ ಈ ಕುರಿತು ಆದೇಶ ಹೊರಡಿಸಿದ್ದು, ಸಾರಿಗೆ ಸೇವೆ ನೀಡುವ ರೊಮುಲಸ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಸುಧೀರ್ ಕುಮಾರ್ ಅವರ ಆಸ್ತಿ ಮತ್ತು ಆದಾಯವನ್ನು ಕೂಲಂಕಷವಾಗಿ ತನಿಖೆ ಮಾಡುವಂತೆ ತಮ್ಮ ಇಲಾಖೆಗೆ ಆದೇಶಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ವಿಜ್, "ನಾವು ವಿಐಪಿ ನಂಬರ್ ಪ್ಲೇಟ್‌ಗಳನ್ನು ಹರಾಜಿನ ಮೂಲಕ ನೀಡುತ್ತೇವೆ. ಹಲವಾರು ಜನರು '8888' ಸಂಖ್ಯೆಗೆ ಬಿಡ್ ಮಾಡಿದ್ದಾರೆ. ಆದಾಗ್ಯೂ, ಅತ್ಯಧಿಕ ಬಿಡ್ ಮಾಡುವ ಮೂಲಕ ಹರಾಜಿನಲ್ಲಿ ಗೆದ್ದ ನಂತರ, ಬಿಡ್ದಾರ (ಸುಧೀರ್ ಕುಮಾರ್) ಮೊತ್ತವನ್ನು ಪಾವತಿಸಲಿಲ್ಲ. ಅದಾಗ್ಯೂ ಅವರ 11,000 ರೂ. ಭದ್ರತಾ ಠೇವಣಿಯನ್ನು ಇಲಾಖೆ ಮುಟ್ಟುಗೋಲು ಹಾಕಿಕೊಂಡಿದೆ. ಮತ್ತು ಆ ಸಂಖ್ಯೆಯನ್ನು ಮತ್ತೆ ಹರಾಜಿಗೆ ನಿಯೋಜಿಸಲಾಗಿದೆ ಎಂದರು.
ಅಂತೆಯೇ ತಮ್ಮ ಆದೇಶದ ಕುರಿತು ಮಾತನಾಡಿದ ವಿಜ್, 'ವಿಐಪಿ ನಂಬರ್ ಪ್ಲೇಟ್‌ನ ಬಿಡ್ ಮೊತ್ತವಾದ 1.17 ಕೋಟಿ ರೂ.ಗಳ ನಿವ್ವಳ ಮೌಲ್ಯವನ್ನು ಸುಧೀರ್ ಕುಮಾರ್ ಹೊಂದಿದ್ದಾರೆಯೇ ಎಂದು ಪರಿಶೀಲಿಸಲು ಕೇಳಿದ್ದಾಗಿ ವಿಜ್ ಹೇಳಿದ್ದಾರೆ.
ಅಲ್ಲದೆ ತನಿಖೆ ನಡೆಸುವಂತೆ ವಿನಂತಿಸಿ ಆದಾಯ ತೆರಿಗೆ ಇಲಾಖೆಗೆ ಪತ್ರ ಬರೆಯುವುದಾಗಿ ಸಚಿವರು ತಿಳಿಸಿದ್ದು, ಆರ್ಥಿಕ ಸಾಮರ್ಥ್ಯವಿಲ್ಲದೆ ಬಿಡ್ದಾರರು ನಂಬರ್ ಪ್ಲೇಟ್‌ನ ಬೆಲೆಯನ್ನು ಹೆಚ್ಚಿಸುವುದನ್ನು ತಡೆಯುವುದು ಇದರ ಉದ್ದೇಶವಾಗಿದೆ. ಹರಾಜಿನಲ್ಲಿ ಬಿಡ್ ಮಾಡುವುದು ಹವ್ಯಾಸವಲ್ಲ, ಅದು ಒಂದು ಜವಾಬ್ದಾರಿ" ಎಂದು ವಿಜ್ ಹೇಳಿದರು.
ಇದೇ ಉದ್ಯಮಿ ಸುಧೀರ್ ಕುಮಾರ್ 'HR88B8888' ಸಂಖ್ಯೆಗೆ ಬರೊಬ್ಬರಿ 1.17 ಕೋಟಿ ರೂ ಹಣ ಬಿಡ್ ಮಾಡಿದ್ದರು. ಆದರೆ ಬಳಿಕ ಅವರು ಈ ಮೊತ್ತವನ್ನು ಪಾವತಿ ಮಾಡುವಲ್ಲಿ ವಿಫಲವಾಗಿದ್ದರಿಂದ ಹರ್ಯಾಣ ಸಾರಿಗೆ ಇಲಾಖೆ ಈ ಸಂಖ್ಯೆಯನ್ನು ಮರು ಹರಾಜಿಗೆ ನಿಯೋಜಿಸಿದೆ.
ಸುಧೀರ್ ಕುಮಾರ್ ಅವರ ಕುಟುಂಬಸ್ಥರು ಈ ಸಂಖ್ಯೆಗೆ ಇಷ್ಟು ದೊಡ್ಡ ಮೊತ್ತದ ಹಣ ಪಾವತಿಸಲು ವಿರೋಧಿಸಿದ್ದರಿಂದ ಸುಧೀರ್ ಕುಮಾರ್ ಹಣ ಪಾವತಿಗೆ ಸಮಯ ಕೇಳಿದ್ದರು. ಆದರೆ ಹರ್ಯಾಣ ಸಾರಿಗೆ ಇಲಾಖೆ ನಿಯಮಾವಳಿಯಂತೆ ಈ ಸಂಖ್ಯೆಯನ್ನು ಮತ್ತೆ ಹರಾಜಿಗೆ ನಿಯೋಜಿಸಿದೆ.