ನಬದ್ವಿಪ್: ನಾಯಿ ಮತ್ತು ಮನುಷ್ಯನ ಬಂಧವೇ ಅಂತದ್ದು. ನಿಷ್ಠತೆಗೆ ಮತ್ತು ನಿಜ ಪ್ರೇಮಕ್ಕೆ ಹೆಸರಾಗಿರೋ ನಾಯಿ ತನ್ನ ಸಾಕಿದವರಿಗಾಗಿ, ಪ್ರೀತಿ ತೋರಿಸಿದವರಿಗಾಗಿ ಪ್ರಾಣ ನೀಡಲು ಕೂಡ ಹೇಸದು. ಈ ಕಥೆ ಸ್ವಲ್ಪ ವಿಭಿನ್ನ. ಆಗಷ್ಟೇ ಹುಟ್ಟಿದ ಮಗುವನ್ನು ರಸ್ತೆಯಲ್ಲಿ ಬಿಟ್ಟುಹೋಗಲಾಗಿದ್ದು, ಈ ಮಗುವಿಗೆ ರಕ್ಷಕರಾಗಿ ಬೀದಿನಾಯಿಗಳು ಸಹಾಯ ಮಾಡಿವೆ.
ಹೌದು, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ರೈಲ್ವೆ ಕಾರ್ಮಿಕರಿರುವ ವಸಾಹತು ಪ್ರದೇಶದ ಶೌಚಾಲಯದ ಹೊರಗೆ ಬಿಟ್ಟು ಹೋಗಲಾಗಿತ್ತು. ಆಗಷ್ಟೇ ಹುಟ್ಟಿದ ಮಗುವಿನ ಮೈಮೇಲಿದ್ದ ರಕ್ತವನ್ನೂ ಒರೆಸಿರಲಿಲ್ಲ. ಮಗುವಿಗೆ ಬಟ್ಟೆಯನ್ನೂ ಹಾಕಿಲ್ಲ. ಅತೀವ್ರ ಚಳಿ ನಡುವೆ ಬೀದಿ ನಾಯಿಗಳು ಮಗುವಿನ ಸುತ್ತಲೂ ನಿಂತು ರಕ್ಷಣೆ ಮಾಡಿವೆ.
ಈ ವೇಳೆ ನಾಯಿಗಳು ಬೊಗಳುತ್ತಿರಲಿಲ್ಲ ಅಥವಾ ಚಲಿಸುತ್ತಿರಲಿಲ್ಲ, ರಾತ್ರಿಯಿಡೀ ಕಾವಲು ಕಾಯುತ್ತಾ ನಿಂತಿರುವುದು, ಯಾರನ್ನೂ ಹತ್ತಿರ ಬರಲು ಬಿಡದೇ ಇರುವುದು ಕಂಡು ಬಂದಿದೆ.
ಮಗುವನ್ನು ಮೊದಲು ಗುರುತಿಸಿದ ಸ್ಥಳೀಯ ನಿವಾಸಿ ಸುಕ್ಲಾ ಮೊಂಡಲ್ ಎಂಬುವವರು ಮಾತನಾಡಿ, ಸ್ಥಳದಲ್ಲಿ ನಾಯಿಗಳಿರುವುದು ಹಾಗೂ ಮಗುವನ್ನು ಅವುಗಳು ಸುತ್ತುವರೆದು ರಕ್ಷಣೆ ಮಾಡುತ್ತಿರುವುದನ್ನು ಕಂಡು ನಮಗೆ ಆಶ್ಚರ್ಯವಾಯಿತು. ನಾಯಿಗಳು ಆಕ್ರಮಣಕಾರಿಯಾಗಿರಲಿಲ್ಲ. ಮಗುವನ್ನು ರಕ್ಷಣೆ ಮಾಡುತ್ತಿರುವುದು ನಮಗೆ ಕಂಡು ಬಂದಿತ್ತು.
ಮತ್ತೊಬ್ಬ ನಿವಾಸಿ ಸುಭಾಷ್ ಪಾಲ್ ಅವರು ಮಾತನಾಡ, ನಾಯಿಗಳು ಸುತ್ತಿರುವ ಜಾಗದಲ್ಲಿ ಮಗು ಇದೆ ಎಂದು ಎಂದು ನಾನು ಭಾವಿಸಿರಲಿಲ್ಲ. ನಾಯಿಗಳು ಮಗುವನ್ನು ಕಾವಲು ಕಾಯುತ್ತಿರುವುದನ್ನು ನಾವು ನೋಡಿರಲಿಲ್ಲ ಎಂದು ತಿಳಿಸಿದ್ದಾರೆ.
ಮಗು ಇರುವುದು ತಿಳಿದ ಕೂಡಲೇ ಮೃದುವಾಗಿ ನಾಯಿಗಳತ್ತ ಧಾವಿಸಿ, ಮಗುವನ್ನು ರಕ್ಷಣೆ ಮಾಡಲಾಯಿತು. ನಂತರ ಮಗುವನ್ನು ಕೃಷ್ಣನಗರ ಸದರ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪರಿಶೀಲನೆ ನಡೆಸಿದ ವೈದ್ಯರು ಮಗುವಿಗೆ ಯಾವುದೇ ಗಾಯಗಳಾಗಿಲ್ಲ. ತಲೆಯ ಮೇಲಿರುವ ರಕ್ತ ಹೆರಿಗೆ ವೇಳೆ ಕಂಡು ಬಂದಿರುವುದು. ಆಗಷ್ಟೇ ಜನಿಸಿದ ಮಗು ಅದಾಗಿದೆ ಎಂದು ಹೇಳಿದ್ದಾರೆಂದು ಸುಭಾಷ್ ಪಾಲ್ ಅವರು ತಿಳಿಸಿದ್ದಾರೆ.
ಈ ನಡುವೆ ಸ್ಥಳಕ್ಕೆ ಪೊಲೀಸರು ಹಾಗೂ ಮಕ್ಕಳ ರಕ್ಷಣೆಯ ಅಧಿಕಾರಿಗಳು ಭೇಟಿ ನೀಡಿದ್ದು, ಮಗುವಿನ ದೀರ್ಘಕಾಲೀನ ಆರೈಕೆಗಾಗಿ ಕಾರ್ಯವಿಧಾನಗಳನ್ನು ಪ್ರಾರಂಭಿಸಿದ್ದಾರೆ.
ನಾವು ದೂರು ನೀಡುವ ನಾಯಿಗಳೇ ಇಂದು ಮಗುವಿನ ರಕ್ಷಣೆ ಮಾಡಿದೆ ಎಂದು ರೈಲ್ವೇ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.