ಮದೀನಾ: ನೂರಾರು ವಿಮಾನಗಳ ರದ್ದತಿಯಿಂದ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಇದರ ಮಧ್ಯೆ ಮದೀನಾದಿಂದ ಹೈದರಾಬಾದ್‌ಗೆ ಹೋಗುತ್ತಿದ್ದ ಇಂಡಿಗೋ ವಿಮಾನಕ್ಕೆ ಗುರುವಾರ ಬಾಂಬ್ ಬೆದರಿಕೆ ಬಂದಿದ್ದು, ವಿಮಾನವನ್ನು ಅಹಮದಾಬಾದ್‌ಗೆ ಡೈವರ್ಟ್ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.
ಪಿಟಿಐ ವರದಿ ಪ್ರಕಾರ, ವಿಮಾನವು ಇಂದು ಮಧ್ಯಾಹ್ನ 12:30 ರ ಸುಮಾರಿಗೆ ಅಹಮದಾಬಾದ್ ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು ಮತ್ತು ಎಲ್ಲಾ ಪ್ರಯಾಣಿಕರು ಹಾಗೂ ಸಿಬ್ಬಂದಿಯನ್ನು ಸಂಪೂರ್ಣ ತಪಾಸಣೆಗಾಗಿ ಒಳಪಡಿಸಲಾಯಿತು ಎಂದು ಪೊಲೀಸ್ ಉಪ ಆಯುಕ್ತ(ವಲಯ 4) ಅತುಲ್ ಬನ್ಸಾಲ್ ತಿಳಿಸಿದ್ದಾರೆ.
ಇಂಡಿಗೋಗೆ ಕಳುಹಿಸಲಾದ ಇಮೇಲ್‌ನಲ್ಲಿ, ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹೇಳಲಾಗಿದೆ. ಅಹಮದಾಬಾದ್ ಹತ್ತಿರದ ವಿಮಾನ ನಿಲ್ದಾಣವಾಗಿರುವುದರಿಂದ, ಪೈಲಟ್ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ತಕ್ಷಣ ಲ್ಯಾಂಡಿಂಗ್‌ಗೆ ಯತ್ನಿಸಿದರು.
ಎಚ್ಚರಿಕೆಯನ್ನು ಸ್ವೀಕರಿಸಿದ ನಂತರ ಸ್ಥಳೀಯ ಪೊಲೀಸರು ಸಿಐಎಸ್‌ಎಫ್ ಮತ್ತು ಎನ್‌ಡಿಆರ್‌ಎಫ್‌ಗೆ ಸಹಾಯ ಮಾಡಲು ವಿಮಾನ ನಿಲ್ದಾಣಕ್ಕೆ ಧಾವಿಸಿದರು. ಆರಂಭಿಕ ಶೋಧದಲ್ಲಿ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಎರಡನೇ ದಿನವೂ ಇಂಡಿಗೋ ಕಾರ್ಯಾಚರಣೆಯ ಅಡಚಣೆಗಳು ಮುಂದುವರೆದಿದ್ದು, ಸಿಬ್ಬಂದಿ ಕೊರತೆ ಮತ್ತು ಎಸ್‌ಐಟಿಎ ಚೆಕ್-ಇನ್ ಸಾಫ್ಟ್‌ವೇರ್‌ನಲ್ಲಿನ ಸಮಸ್ಯೆಯಿಂದ ಬುಧವಾರ 200ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿತ್ತು.