ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷರಿಗೆ ಗುರುವಾರ ಅಪ್ಪುಗೆಯ ಸ್ವಾಗತ ನೀಡಿದ ನಂತರ ಹೇಳಿದ್ದಾರೆ.
ಇಂದು ಸಂಜೆ ಖುದ್ದು ಪಾಲಂ ವಿಮಾನ ನಿಲ್ದಾಣಕ್ಕೆ ತೆರಳಿ ದೆಹಲಿಗೆ ಆಗಮಿಸಿದ ಪುಟಿನ್ ಅವರನ್ನು ಸ್ವಾಗತಿಸಿದ ನಂತರ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ನನ್ನ ಸ್ನೇಹಿತ ಪುಟಿನ್‌ರನ್ನು ಸ್ವಾಗತಿಸಲು ತುಂಬಾ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.
ಎರಡೂ ದೇಶಗಳ ನಡುವಿನ ದೀರ್ಘಕಾಲದ ಸಂಬಂಧವನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ಭಾರತ-ರಷ್ಯಾ ಸ್ನೇಹವು 'ನಮ್ಮ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ' ಎಂದು ಹೇಳಿದ್ದಾರೆ.
"ನನ್ನ ಸ್ನೇಹಿತ ಅಧ್ಯಕ್ಷ ಪುಟಿನ್ ಅವರನ್ನು ಭಾರತಕ್ಕೆ ಸ್ವಾಗತಿಸಲು ಸಂತೋಷವಾಗುತ್ತಿದೆ. ಇಂದು ಸಂಜೆ ಮತ್ತು ನಾಳೆ ನಮ್ಮ ಸಂವಾದಗಳನ್ನು ಎದುರು ನೋಡುತ್ತಿದ್ದೇನೆ. ಭಾರತ-ರಷ್ಯಾ ಸ್ನೇಹವು ಕಾಲಾತೀತವಾಗಿದ್ದು, ಇದು ನಮ್ಮ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಿದೆ" ಎಂದು ಮೋದಿ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ಪ್ರಧಾನಿ ಮೋದಿ ಅವರು ಮಾಸ್ಕೋಗೆ ಭೇಟಿ ನೀಡಿದ್ದಾಗ ರಷ್ಯಾ ಅಧ್ಯಕ್ಷ ಪುಟಿನ್ ಅವರು ನೀಡಿದ ಆತಿಥ್ಯಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಅವರು ಇಂದು ರಾತ್ರಿ ಅವರಿಗೆ ಖಾಸಗಿ ಭೋಜನ ಕೂಟ ಆಯೋಜಿಸಿದ್ದಾರೆ.