ನವದೆಹಲಿ: ದೆಹಲಿ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಗುರುವಾರವೂ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, 300ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ.
ಎರಡನೇ ದಿನವೂ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಇಂಡಿಗೋದಲ್ಲಿ ಭಾರಿ ಅಸ್ತವ್ಯಸ್ತತೆ ಮುಂದುವರೆದಿದ್ದು, ದೇಶಾದ್ಯಂತ ಸಾವಿರಾರ ಪ್ರಯಾಣಿಕರ ಮೇಲೆ ತೀವ್ರ ಪರಿಣಾಮ ಬೀರಿದೆ.
ರಾಷ್ಟ್ರವ್ಯಾಪಿ ಸಿಬ್ಬಂದಿ ಕೊರತೆ ಮತ್ತು ಸಾಫ್ಟ್‌ವೇರ್ ದೋಷಗಳಿಂದಾಗಿ 200ಕ್ಕೂ ಹೆಚ್ಚು ವಿಮಾನಗಳು ರದ್ದಾದ ಒಂದು ದಿನದ ನಂತರ ಇನ್ನೂ ಅನೇಕ ವಿಮಾನಗಳು ವಿಳಂಬವಾಗಿದ್ದು, 100ಕ್ಕೂ ಹೆಚ್ಚು ವಿಮಾನ ರದ್ದುಗೊಂಡಿವೆ.
ಪ್ರಸ್ತುತ ಪರಿಸ್ಥಿತಿಗೆ ಕಾರಣವಾಗುವ ಸಂಗತಿಗಳನ್ನು ಮತ್ತು ನಡೆಯುತ್ತಿರುವ ವಿಳಂಬ ಹಾಗೂ ರದ್ದತಿಗಳನ್ನು ತಗ್ಗಿಸುವ ಯೋಜನೆ ಕುರಿತು ಡಿಜಿಸಿಎ ಪ್ರಧಾನ ಕಚೇರಿಗೆ ವರದಿ ಮಾಡುವಂತೆ ವಿಮಾನಯಾನ ಸಂಸ್ಥೆಗೆ ಸೂಚಿಸಲಾಗಿದೆ.
ದೆಹಲಿಯ ಐಜಿಐಎ ವಕ್ತಾರರ ಪ್ರಕಾರ, ಒಟ್ಟು 44 ನಿರ್ಗಮನ ಮತ್ತು 47 ಆಗಮನ ವಿಮಾನಗಳನ್ನು ಇಂದು ರದ್ದುಪಡಿಸಲಾಗಿದೆ.
"ಇವು ನಿನ್ನೆ ಗೊಂದಲದ ನಂತರ ನಿರ್ಧರಿಸಲಾದ ಯೋಜಿತ ರದ್ದತಿಗಳಾಗಿವೆ. ವಿಮಾನಯಾನ ಸಂಸ್ಥೆಯು ಈಗಾಗಲೇ ವಿಮಾನ ನಿಲ್ದಾಣ ಮತ್ತು ಅದರ ಗ್ರಾಹಕರಿಗೆ ಇದರ ಬಗ್ಗೆ ಎಚ್ಚರಿಕೆ ನೀಡಿದೆ" ಎಂದು ವಕ್ತಾರರು ತಿಳಿಸಿದ್ದಾರೆ.
ರದ್ದಾದ ವಿಮಾನಗಳಲ್ಲಿ ದೆಹಲಿಯಿಂದ ಮುಂಬೈ, ಹೈದರಾಬಾದ್ ಮತ್ತು ಬೆಂಗಳೂರಿಗೆ ಹೋಗುವ ವಿಮಾನಗಳು ಸೇರಿವೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಒಟ್ಟು 70 ವಿಮಾನಗಳು ರದ್ದಾಗಿವೆ ಎಂದು ವರದಿಯಾಗಿದೆ, ಇದರಲ್ಲಿ ಸುಮಾರು 40 ಹೊರಹೋಗುವ ಮತ್ತು 30 ಒಳಬರುವ ವಿಮಾನಗಳು ಸೇರಿವೆ. ಮುಂಬೈ ವಿಮಾನ ನಿಲ್ದಾಣದಲ್ಲಿ, 45 ನಿರ್ಗಮನ ಮತ್ತು 41 ಒಳಬರುವ ವಿಮಾನಗಳು ರದ್ದಾಗಿದ್ದು, ಒಟ್ಟು 86 ವಿಮಾನಗಳ ಮೇಲೆ ಪರಿಣಾಮ ಬೀರಿದೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ, 13 ಹೊರಹೋಗುವ ಮತ್ತು 13 ಒಳಬರುವ ವಿಮಾನಗಳು ರದ್ದಾಗಿವೆ.
ಅನಿರೀಕ್ಷಿತ ಕಾರ್ಯಾಚರಣಾ ಸವಾಲುಗಳು, ಸಣ್ಣ ತಾಂತ್ರಿಕ ದೋಷ, ಚಳಿಗಾಲದ ವೇಳಾಪಟ್ಟಿ ಬದಲಾವಣೆ, ಹವಾಮಾನ ವೈಪರೀತ್ಯ, ವಿಮಾನಯಾನ ವ್ಯವಸ್ಥೆಯ ಹೆಚ್ಚಿದ ವಾಹನ ದಟ್ಟಣೆ ಮತ್ತು ನವೀಕರಿಸಿದ ಫ್ಲೈಟ್ ಡ್ಯೂಟಿ ಟೈಮ್ ಲಿಮಿಟೇಷನ್ ಜಾರಿ ಸೇರಿ ಕೆಲ ವಿಷಯಗಳು ನಮ್ಮ ವಿಮಾನಗಳ ಕಾರ್ಯಾಚರಣೆಯ ಮೇಲೆ ಪ್ರಭಾವ ಬೀರಿವೆ. ಅರ್ಹ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಲಾಗುತ್ತದೆ ಅಥವಾ ಪರ್ಯಾಯ ವಿಮಾನಗಳನ್ನು ಒದಗಿಸಲಾಗುತ್ತದೆ ಎಂದು ಇಂಡಿಗೋ ತಿಳಿಸಿದೆ.