ಮುಂಬೈ/ನವದೆಹಲಿ: ಕಳೆದ ಕೆಲವು ದಿನಗಳಿಂದ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷಯ ಅಂದರೆ ಅದು ವಿಮಾನ ರದ್ದು ವಿಚಾರ, ಅದರಲ್ಲೂ ಭಾರತೀಯ ವಿಮಾನಯಾನ ಸಂಸ್ಥೆಯಾಗಿರುವ ಇಂಡಿಗೋ ವಿಮಾನಗಳು (IndiGo Flights) ಭಾರೀ ಸುದ್ದಿಯಲ್ಲಿದೆ,
ಗುರುವಾರ ಬೆಂಗಳೂರು ಸೇರಿ ದೇಶದ ಹಲವೆಡೆ 500ಕ್ಕೂ ಅಧಿಕ ವಿಮಾನಗಳನ್ನು ರದ್ದುಗೊಳಿಸಿದ್ದ ಇಂಡಿಗೋ, ಶುಕ್ರವಾರ ಮತ್ತೆ 400 ವಿಮಾನಗಳ ಹಾರಾಟವನ್ನು ರದ್ದುಪಡಿಸಿದೆ.
ದೆಹಲಿ ವಿಮಾನ ನಿಲ್ದಾಣದಲ್ಲಿ ಆಗಮನ ಮತ್ತು ನಿರ್ಗಮನ ಸೇರಿದಂತೆ 220 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 100 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೈದರಾಬಾದ್ ವಿಮಾನ ನಿಲ್ದಾಣದಲ್ಲಿಯೂ 90 ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ವಿಮಾನಯಾನ ಸಂಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ತಮ್ಮ ಲಗೇಜ್ ಪಡೆಯಲು 12 ಗಂಟೆಗಳಿಗೂ ಹೆಚ್ಚು ಕಾಲ ಪರದಾಡುವಂತಿದ್ದು, ಕೆಲವರು ಆಹಾರ ಮತ್ತು ನೀರಿನ ಕೊರತೆ ಎದುರಿಸಿದ್ದಾರೆಂದು ತಿಳಿದುಬಂದಿದೆ.
ಇಂಡಿಗೋ ಆರಂಭವಾಗಿ 20 ವರ್ಷವಾದರೂ, ಅದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ರದ್ದಾಗಿದೆ.
ಸತತ ನಾಲ್ಕನೇ ದಿನವೂ ಕಾರ್ಯಾಚರಣೆಯ ಅಡೆತಡೆಗಳು ಇಂಡಿಗೋ ಏರ್‌ಲೈನ್‌ನಲ್ಲಿ ಮುಂದುವರಿದಿದ್ದು, ಪೈಲಟ್ ನಿಯೋಜನೆಯಲ್ಲಿ ಸಮಸ್ಯೆಗಳು ಮತ್ತು ತಾಂತ್ರಿಕ ಅಡಚಣೆಗಳು ಸೇರಿದಂತೆ ಹಲವು ಅಂಶಗಳು ಇದಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.
ಕಾರ್ಯಾಚರಣೆಗಳನ್ನು ಸಹಜ ಸ್ಥಿತಿಗೆ ತರಲು ಇಂಡಿಗೋ ತನ್ನ ಪ್ರಯಾಣದ ವೇಳಾಪಟ್ಟಿಗಳನ್ನು ಅಪ್ಡೇಟ್ ಮಾಡಿದೆ. ಮುಂಬರುವ ಎರಡು-ಮೂರು ದಿನಗಳಲ್ಲೂ ಮತ್ತಷ್ಟು ವಿಮಾನಗಳು ರದ್ದಾಗಬಹುದು ಎಂದು ವಿಮಾನಯಾನ ಸಂಸ್ಥೆ ಜನರಿಗೆ ಸೂಚನೆ ನೀಡಿದೆ.
ಪ್ರತಿದಿನ 2,300 ವಿಮಾನಗಳನ್ನು ನಿರ್ವಹಿಸುವ ಇಂಡಿಗೋ, ಸಮಯಪಾಲನೆಗೆ ಹೆಸರುವಾಸಿಯಾಗಿತ್ತು. ಈ ಗಂಭೀರ ಪರಿಸ್ಥಿತಿಯ ಕುರಿತು ಪರಿಶೀಲಿಸಲು, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನಯಾನ ನಿಯಂತ್ರಕ ಡಿಜಿಸಿಎ ಅಧಿಕಾರಿಗಳು ಗುರುವಾರ ಇಂಡಿಗೋ ಸಂಸ್ಥೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಪರಿಹಾರಕ್ಕಾಗಿ ಚರ್ಚೆ ನಡೆಸಿದ್ದಾರೆ.
ಕಾರ್ಯಾಚರಣೆಗಳನ್ನು ಸಹಜ ಸ್ಥಿತಿಗೆ ತರುವುದು ಮತ್ತು ಸಮಯಪಾಲನೆಯನ್ನು ಮರಳಿ ತರುವುದು ಸುಲಭದ ಗುರಿಯಲ್ಲ ಎಂದು ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ತಮ್ಮ ಸಿಬ್ಬಂದಿಗೆ ತಿಳಿಸಿದ್ದಾರೆ.