ನವದೆಹಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ವಾಸ್ತವ್ಯ ಹೂಡಿದ್ದು, ಅವರು ದೇಶಕ್ಕೆ ಬರಲು ಕಾರಣವಾದ "ಸಂದರ್ಭಗಳಿಂದ" ಪ್ರಭಾವಿತರಾಗಿ ಅವರು ತೆಗೆದುಕೊಂಡಿರುವ ವೈಯಕ್ತಿಕ ನಿರ್ಧಾರವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಶನಿವಾರ ಹೇಳಿದ್ದಾರೆ.
ಕಳೆದ ವರ್ಷ ಆಗಸ್ಟ್‌ನಲ್ಲಿ ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಬಾಂಗ್ಲಾದಲ್ಲಿ ಭುಗಿಲೆದ್ದ ಹಿಂಸಾಚಾರದ ಸಮಯದಲ್ಲಿ ಅವರ 15 ವರ್ಷಗಳ ಆಡಳಿತವು ಕೊನೆಗೊಂಡಿತು. ಈ ಹಿಂಸಾಚಾರದಲ್ಲಿ ನೂರಾರು ಜನರು ಸಾವನ್ನಪ್ಪಿದ್ದು, ಸಾವಿರಾರು ಜನರು ಗಾಯಗೊಂಡಿದ್ದಾರೆ.
ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ಮೇಲೆ ಹಸೀನಾ ನೇತೃತ್ವದ ಸರ್ಕಾರ ನಡೆಸಿದ ಕ್ರೂರ ಕ್ರಮಕ್ಕಾಗಿ "ಮಾನವೀಯತೆಯ ವಿರುದ್ಧದ ಅಪರಾಧಗಳಿಗಾಗಿ" ಢಾಕಾದ ವಿಶೇಷ ನ್ಯಾಯಮಂಡಳಿ 78 ವರ್ಷದ ಹಸೀನಾ ಅವರಿಗೆ ಕಳೆದ ತಿಂಗಳು ಮರಣದಂಡನೆ ವಿಧಿಸಿತ್ತು.
ಎನ್ ಡಿಟಿವಿಯ ಮಾಧ್ಯಮ ಸಂವಾದವೊಂದರಲ್ಲಿ ಜೈಶಂಕರ್ ಅವರಿಗೆ "ಅವರು ಬಯಸಿದಷ್ಟು ಕಾಲ" ಭಾರತದಲ್ಲಿ ಉಳಿಯಲು ಹಸೀನಾ ಅವರಿಗೆ ಸ್ವಾಗತವಿದೆಯೇ ಎಂದು ಕೇಳಿದಾಗ, ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವರು, "ಅದು ಬೇರೆ ವಿಷಯ, ಅಲ್ಲವೇ? ಅವರು ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ಇಲ್ಲಿಗೆ ಬಂದರು, ಮತ್ತು ಆ ಸನ್ನಿವೇಶವು ಅವರಿಗೆ ಏನಾಗುತ್ತದೆ ಎಂಬುದರಲ್ಲಿ ಸ್ಪಷ್ಟವಾಗಿ ಒಂದು ಅಂಶವಾಗಿದೆ ಎಂದು ನಾನು ಭಾವಿಸುತ್ತೇನೆ. ಆದರೆ ಮತ್ತೊಮ್ಮೆ, ಅದು ಅವರು ತಮ್ಮ ಮನಸ್ಸನ್ನು ರೂಪಿಸಿಕೊಳ್ಳಬೇಕಾದ (ದೃಢ ನಿರ್ಧಾರ ಮಾಡಬೇಕಾದ ವಿಷಯ) ವಿಷಯ." ಎಂದು ಹೇಳಿದ್ದಾರೆ.
ನವದೆಹಲಿ ಮತ್ತು ಢಾಕಾ ನಡುವಿನ ಸಂಬಂಧದ ಬಗ್ಗೆ ಮಾತನಾಡಿರುವ ಜೈಶಂಕರ್, ನೆರೆಯ ದೇಶದಲ್ಲಿ ವಿಶ್ವಾಸಾರ್ಹ ಪ್ರಜಾಪ್ರಭುತ್ವ ಪ್ರಕ್ರಿಯೆಯ ಅಗತ್ಯತೆಯ ಬಗ್ಗೆ ಭಾರತದ ನಿಲುವನ್ನು ಒತ್ತಿ ಹೇಳಿದ್ದಾರೆ.
ಬಾಂಗ್ಲಾದೇಶದಲ್ಲಿನ ಹಿಂದಿನ ರಾಜಕೀಯ ಸಮಸ್ಯೆಗಳನ್ನು ಉಲ್ಲೇಖಿಸಿರುವ ಜೈಶಂಕರ್, "ಬಾಂಗ್ಲಾದೇಶದ ಜನರು, ವಿಶೇಷವಾಗಿ ಈಗ ಅಧಿಕಾರದಲ್ಲಿರುವವರು, ಈ ಹಿಂದೆ ಚುನಾವಣೆಗಳನ್ನು ಹೇಗೆ ನಡೆಸಲಾಯಿತು ಎಂಬುದರ ಬಗ್ಗೆ ಆಕ್ಷೇಪ ಹೊಂದಿದ್ದರು ಎಂಬುದನ್ನು ನಾವು ಕೇಳಿದ್ದೇವೆ. ಈಗ, ವಿಷಯವು ಚುನಾವಣೆಯಾಗಿದ್ದರೆ, ಮೊದಲು ಮಾಡಬೇಕಾದದ್ದು ನ್ಯಾಯಯುತ ಚುನಾವಣೆಯನ್ನು ನಡೆಸುವುದಾಗಿದೆ" ಎಂದು ಹೇಳಿದ್ದಾರೆ.
ದ್ವಿಪಕ್ಷೀಯ ಸಂಬಂಧಗಳ ಭವಿಷ್ಯದ ಬಗ್ಗೆ ಆಶಾವಾದವನ್ನು ಇದೇ ವೇಳೆ ಜೈಶಂಕರ್ ವ್ಯಕ್ತಪಡಿಸಿದ್ದಾರೆ. ಭಾರತದ ನೆರೆಯ ರಾಷ್ಟ್ರದ ಬಗ್ಗೆ ಪ್ರಜಾಸತ್ತಾತ್ಮಕ ಆದ್ಯತೆಯನ್ನು ಒತ್ತಿ ಹೇಳಿದ್ದು, "ನಮಗೆ ಸಂಬಂಧಿಸಿದಂತೆ, ನಾವು ಬಾಂಗ್ಲಾದೇಶಕ್ಕೆ ಶುಭ ಹಾರೈಸುತ್ತೇವೆ. ಪ್ರಜಾಪ್ರಭುತ್ವ ರಾಷ್ಟ್ರವಾಗಿ, ಯಾವುದೇ ಪ್ರಜಾಸತ್ತಾತ್ಮಕ ದೇಶ ಪ್ರಜಾಸತ್ತಾತ್ಮಕ ಪ್ರಕ್ರಿಯೆಯ ಮೂಲಕ ಜನರ ಇಚ್ಛೆಯನ್ನು ಖಚಿತಪಡಿಸಿಕೊಳ್ಳುವುದನ್ನು ನೋಡಲು ಬಯಸುತ್ತದೆ ಎಂದು ನಾವು ಭಾವಿಸುತ್ತೇವೆ" ಎಂದು ಜೈಶಂಕರ್ ಹೇಳಿದ್ದಾರೆ.