ನವದೆಹಲಿ: ಇಂಡಿಗೋ ವಿಮಾನ ಬಿಕ್ಕಟ್ಟು ದೇಶಾದ್ಯಂತ ಕೋಲಾಹಲ ಸೃಷ್ಟಿಸಿದೆ. ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಪ್ರಮುಖ ಕಾರ್ಯಾಚರಣೆಯ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ನಡುವಲ್ಲೇ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಇಂಡಿಗೋ ವಿಮಾನಯಾನ ಸಂಸ್ಥೆಯ ಬಿಕ್ಕಟ್ಟಿನ ಬಗ್ಗೆ ವಿವರಣೆ ನೀಡುವಂತೆ ಒತ್ತಾಯಿಸಿರುವ ಡಿಜಿಸಿಎ, ಎಲ್ಬರ್ಸ್ ಅವರಿಗೆ ಪ್ರತಿಕ್ರಿಯಿಸಲು 24 ಗಂಟೆಗಳ ಕಾಲಾವಕಾಶ ನೀಡಿದೆ. ಒಂದು ವೇಳೆ ಉತ್ತರಿಸಲು ವಿಫಲವಾದಲ್ಲಿ ದಂಡನಾತ್ಮಕ ಕ್ರಮಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದೆ.
ಇದರ ಜೊತೆಗೆ ಸಿಇಒ ಆಗಿ ವಿಮಾನಯಾನ ಸಂಸ್ಥೆಯ ಪರಿಣಾಮಕಾರಿ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ನಿಮ್ಮ ಮೇಲಿದೆ. ವಿಶ್ವಾಸಾರ್ಹ ಕಾರ್ಯಾಚರಣೆಗಳನ್ನು ನಡೆಸಲು ಮತ್ತು ಪ್ರಯಾಣಿಕರಿಗೆ ಅಗತ್ಯವಾದ ಸೌಲಭ್ಯಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ನೀವು ನಿಮ್ಮ ಕರ್ತವ್ಯದಲ್ಲಿ ವಿಫಲರಾಗಿದ್ದೀರಿ ಎಂದು ಬೇಸರ ವ್ಯಕ್ತಪಡಿಸಿದೆ.
ಇಂಡಿಗೋ ವಿಮಾನದ ಕಾರ್ಯಾಚರಣೆಗಳಲ್ಲಿ ಭಾರಿ ಅಡಚಣೆಗಳು ಕಂಡುಬಂದಿವೆ ಇದು ದೇಶಾದ್ಯಂತ ಪ್ರಯಾಣಿಕರಿಗೆ ತೀವ್ರ ಅನಾನುಕೂಲತೆ, ತೊಂದರೆ ಮತ್ತು ಯಾತನೆಯನ್ನು ಉಂಟುಮಾಡಿದೆ ಎಂದು ಡಿಜಿಸಿಎ ನೋಟಿಸ್‌ನಲ್ಲಿ ಉಲ್ಲೇಖಿಸಿದೆ.
ಹೊಸದಾಗಿ ಅನುಮೋದಿಸಲಾದ ವಿಮಾನ ಕರ್ತವ್ಯ ಸಮಯ ಮಿತಿ (ಎಫ್‌ಡಿಟಿಎಲ್) ಮಾನದಂಡಗಳ ಅನುಷ್ಠಾನಕ್ಕೆ ಅಗತ್ಯವಾದ ಸಾಕಷ್ಟು ವ್ಯವಸ್ಥೆಗಳನ್ನು ಮಾಡುವಲ್ಲಿ ಇಂಡಿಗೋ ವಿಮಾನ ಸಂಸ್ಥೆ ವಿಫಲವಾಗಿರುವುದೇ ಬಿಕ್ಕಟ್ಟಿಗೆ ಪ್ರಮುಖ ಕಾರಣ ಎಂದು ಡಿಜಿಸಿಎ ತನ್ನ ನೋಟಿಸ್‌ನಲ್ಲಿ ತಿಳಿಸಿದೆ.
ಈ ನಡುವೆ ಬೇರೆ ಬೇರೆ ವಿಮಾನ ಸಂಸ್ಥೆಗಳು ಬಿಕ್ಕಟ್ಟಿನ ಲಾಭ ಪಡೆಯಲು ಟಿಕೆಟ್ ದರವನ್ನ ಏರಿಕೆ ಮಾಡಿದ್ದು, ಇದಕ್ಕೆ ಬ್ರೇಕ್ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.
ಇಂಡಿಗೋದಲ್ಲಿ ಕಾರ್ಯಾಚರಣೆಯ ಸಮಸ್ಯೆಗಳಿಂದಾಗಿ ದರಗಳಲ್ಲಿನ ಅಸಮಂಜಸ ಏರಿಕೆಯನ್ನು ತಡೆಯಲು ಸಾರ್ವಜನಿಕ ಹಿತಾಸಕ್ತಿಯಿಂದ ಕ್ರಮ ಕೈಗೊಳ್ಳಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ತಿಳಿಸಿದೆ.