ಚಿತ್ತೋರ್‌ಗಢ: ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ಭಾನುವಾರ ತಡರಾತ್ರಿ ಹೃದಯವಿದ್ರಾವಕ ಅಪಘಾತ ಸಂಭವಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಚಿತ್ತೋರ್‌ಗಢ-ಕೋಟಾ ಹೆದ್ದಾರಿಯ ಬೇಗುನ್ ಪಟ್ಟಣದ ಬಳಿಯ ಮದ್ನಾ ಪ್ರದೇಶದಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟಿದ್ದಾರೆ. ಇತರ ಮೂವರು ಸ್ಥಿತಿ ಗಂಭೀರವಾಗಿದೆ. ಆಘಾತಕಾರಿ ಸಂಗತಿಯೆಂದರೆ, ಈ ಯುವಕರು ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಬಂದಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ಅವರೇ ರಸ್ತೆ ಅಪಘಾತಕ್ಕೆ ಬಲಿಯಾದರು.
ಭಾನುವಾರ ರಾತ್ರಿ 8 ಗಂಟೆ ಸುಮಾರಿಗೆ, ರಾಂಗ್ ರೂಟ್ ನಲ್ಲಿ ಬಂದ ಸ್ವಿಫ್ಟ್ ಕಾರು ಹೆದ್ದಾರಿಯಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ಶಂಭುಲಾಲ್ ಮತ್ತು ಅವರ ಪತ್ನಿ ಕಾಳಿ ಬಾಯಿ ದಂಪತಿಗೆ ಡಿಕ್ಕಿ ಹೊಡೆದಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರೂ ರಸ್ತೆಯಲ್ಲಿ ನೋವಿನಿಂದ ನರಳುತ್ತಿದ್ದರು. ಇದನ್ನು ನೋಡಿದ ನಾಲ್ವರು ಯುವಕರು ಸಹಾಯ ಮಾಡಲು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಪ್ರಯತ್ನಿಸಿದರು.
ಏತನ್ಮಧ್ಯೆ, ಚಿತ್ತೋರ್‌ಗಢದಿಂದ ಕೋಟಾಗೆ ಅತಿವೇಗದಲ್ಲಿ ಚಲಿಸುತ್ತಿದ್ದ ಮತ್ತೊಂದು ಕಾರು, ರಸ್ತೆಯಲ್ಲಿದ್ದ ಏಳು ಮಂದಿಗೆ ಡಿಕ್ಕಿ ಹೊಡೆದಿದೆ. ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದರೆ ಮೂವರು ಸ್ಥಿತಿ ಗಂಭೀರವಾಗಿದೆ.
ಹೇಮರಾಜ್ ಗುರ್ಜರ್ (35), ರಾಜೇಶ್ ಮೀನಾ (29), ಫೋರುಲಾಲ್ ಗುರ್ಜರ್ (33), ಮತ್ತು ಸೋನು ಗುರ್ಜರ್ (40) ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಠಾಣಾಧಿಕಾರಿ ಶಿವಲಾಲ್ ಮೀನಾ ತಿಳಿಸಿದ್ದಾರೆ. ಗಾಯಗೊಂಡವರಲ್ಲಿ ಸೂರಜ್ಮಲ್ ಭಿಲ್, ಬೈಕ್ ಸವಾರಿ ಮಾಡುತ್ತಿದ್ದ ದಂಪತಿ ಶಂಭುಲಾಲ್ ಮತ್ತು ಕಾಲಿ ಬಾಯಿ, ಕನಿಷ್ಕ್, ಅಂತರರಾಮ್ ದಾಸ್, ರೌನಕ್ ಮತ್ತು ದೇವೇಶ್ ಸೇರಿದ್ದಾರೆ. ಎಲ್ಲರನ್ನೂ ಬೇಗನ್ ಮತ್ತು ಕಟುಂಡಾ ಆಸ್ಪತ್ರೆಗಳಿಂದ ಚಿತ್ತೋರ್‌ಗಢ, ಕೋಟಾ ಮತ್ತು ಉದಯಪುರಕ್ಕೆ ಕರೆದೊಯ್ಯಲಾಯಿತು.