ನವದೆಹಲಿ: 'ವಂದೇ ಮಾತರಂ' ಗೀತೆಯ 150ನೇ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ 'ವಂದೇ ಮಾತರಂ' ಕುರಿತ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿ ಸರ್ಕಾರದ ವಿರುದ್ಧ ಕಿಡಿಕಾರಿದರು.
ದೇಶಕ್ಕೆ ಸ್ವಾತಂತ್ರ್ಯ ಬಂದ 79 ವರ್ಷಗಳ ನಂತರ ಚರ್ಚೆಯ ಅಗತ್ಯವೇನಿತ್ತು?
ಭಾರತಕ್ಕೆ ಸ್ವಾತಂತ್ರ್ಯ ಬಂದು 79 ವರ್ಷಗಳ ನಂತರ, ಚರ್ಚಿಸಲು ಅನೇಕ ಮಹತ್ವದ ವಿಷಯಗಳಿರುವಾಗ ಸದನವು ರಾಷ್ಟ್ರೀಯ ಗೀತೆಯ ಬಗ್ಗೆ ಏಕೆ ಚರ್ಚೆ ನಡೆಸುತ್ತಿದೆ ಎಂದು ಪ್ರಶ್ನಿಸಿದರು. ನಾವು ಚರ್ಚಿಸುತ್ತಿರುವ ವಿಷಯವು ದೇಶದ ಆತ್ಮದ ಭಾಗವಾಗಿದೆ. ನಾವು 'ವಂದೇ ಮಾತರಂ' ಹೇಳಿದಾಗ ಅದು ನಮ್ಮ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸುತ್ತದೆ. ಈ ಚರ್ಚೆ ವಿಚಿತ್ರವಾಗಿದೆ. ಈ ಹಾಡು ಜನರ ಹೃದಯದಲ್ಲಿ ಸ್ಥಾನ ಪಡೆದಿದೆ ಹಾಗಾದರೆ ಚರ್ಚೆಯ ಅಗತ್ಯವೇನು? ಎಂದು ಪ್ರಶ್ನಿಸಿದರು.
"ನಮ್ಮ ಉದ್ದೇಶವೇನು, ಜನರ ಬಗ್ಗೆ ನಮ್ಮ ಹೊಣೆಗಾರಿಕೆ ಏನು? ನಾವು ಅದನ್ನು ಹೇಗೆ ಪೂರೈಸುತ್ತಿದ್ದೇವೆ. ರಾಷ್ಟ್ರಗೀತೆಯ ಬಗ್ಗೆ ಏಕೆ ಚರ್ಚೆ ನಡೆಸುತ್ತಿದ್ದೇವೆ? ಅದರ ಬಗ್ಗೆ ಏನು ಚರ್ಚೆಯಾಗಬಹುದು?" ಎಂದು ಟೀಕಾಪ್ರಹಾರ ನಡೆಸಿದರು.
ಜನರ ಗಮನ ಬೇರೆಡೆ ಸೆಳೆಯಲು ಚರ್ಚೆ
ಜನರ ಗಮನವನ್ನು ಬೇರೆಡೆ ಸೆಳೆಯಲು ಸರ್ಕಾರ ವಂದೇ ಮಾತರಂ ಕುರಿತು ಚರ್ಚೆ ನಡೆಸುತ್ತಿದೆ. ಈಗಿನ ಹಾಗೂ ಭವಿಷ್ಯವನ್ನು ನೋಡಲು ಬಯಸದ ಕಾರಣ ಭೂತಕಾಲದ ಬಗ್ಗೆ ಅಧ್ಯಯನ ಮಾಡಬೇಕೆಂದು ಸರ್ಕಾರ ಬಯಸುತ್ತದೆ ಎಂದರು.
ದೇಶದ ಜನರು ಸಾಕಷ್ಟು ಸಮಸ್ಯೆಗಳಿಂದ ನರಳುತ್ತಿದ್ದಾರೆ. ದೇಶದಲ್ಲಿನ ಜನರು ಸಂತೋಷವಾಗಿಲ್ಲ, ಸಾಕಷ್ಟು ಸಮಸ್ಯೆಗಳಿಂದ ನರಳುತ್ತಿದ್ದಾರೆ. ಸರ್ಕಾರ ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಪ್ರಯತ್ನಿಸುತ್ತಿಲ್ಲ. ಮೋದಿ ಅವರ ಆತ್ಮ ವಿಶ್ವಾಸ ಕಡಿಮೆಯಾಗುತ್ತಿದೆ. ಅವರ ನೀತಿಗಳು ದೇಶವನ್ನು ದುರ್ಬಲಗೊಳಿಸುತ್ತಿವೆ ಎಂದು ಟೀಕಾ ಪ್ರಹಾರ ನಡೆಸಿದರು.
ದೇಶದ ಪ್ರತಿಯೊಂದು ಭಾಗದಲ್ಲೂ ವಂದೇ ಮಾತರಂ ಜೀವಂತ:
ದೇಶದ ಪ್ರತಿಯೊಂದು ಭಾಗದಲ್ಲೂ 'ವಂದೇ ಮಾತರಂ' ಜೀವಂತವಾಗಿದೆ. ಅದರ ಬಗ್ಗೆ ಯಾವುದೇ ಚರ್ಚೆ ನಡೆಯುವ ಅಗತ್ಯವಿಲ್ಲ."ನಾವು ಯಾಕೆ 'ವಂದೇ ಮಾತರಂ' ಬಗ್ಗೆ ಚರ್ಚೆ ನಡೆಸುತ್ತಿದ್ದೇವೆ? ರಾಷ್ಟ್ರಗೀತೆಯ ಬಗ್ಗೆ ಯಾವುದೇ ಚರ್ಚೆ ನಡೆಸಬಾರದು ಎಂದು ಹೇಳಿದರು.
ನೆಹರೂ ಬಗ್ಗೆ ಚರ್ಚೆಗೆ ಸಮಯ ನಿಗದಿಪಡಿಸಿ:
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ವಿರುದ್ಧ ಹೊಸ ಆರೋಪಗಳನ್ನು ಮಾಡಲು ಸರ್ಕಾರವು ಈ ಚರ್ಚೆಯನ್ನು ಬಯಸಿದೆ ಎಂದು ಆರೋಪಿಸಿದರು. "ನೀವು ನೆಹರೂ ಬಗ್ಗೆ ಮಾತನಾಡುತ್ತಿರುವುದರಿಂದ ಒಂದು ಕೆಲಸ ಮಾಡೋಣ, ಚರ್ಚೆಗೆ ಸಮಯ ನಿಗದಿಪಡಿಸೋಣ, ಅವರ ವಿರುದ್ಧ ಮಾಡಿರುವ ಅಪಮಾನಗಳನೆಲ್ಲಾ ಪಟ್ಟಿ ಮಾಡಿ. ಅದನ್ನು ಚರ್ಚಿಸಿ, ಎಲ್ಲಾ ಅಧ್ಯಾಯವನ್ನು ಒಮ್ಮೆ ಮುಕ್ತಾಯಗೊಳಿಸೋಣ" ಎಂದು ಅವರು ಹೇಳಿದರು.
ವಂದೇ ಮಾತರಂ ರಚನೆಯಾದದ್ದು ಯಾವಾಗ?
ರಾಷ್ಟ್ರೀಯ ಗೀತೆ ವಂದೇ ಮಾತರಂನ "ಕಾಲಗಣನೆ" ಯನ್ನು ಸಹ ಪಟ್ಟಿ ಮಾಡಿದ ಪ್ರಿಯಾಂಕಾ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸುಭಾಸ್ ಚಂದ್ರ ಬೋಸ್ ನಡುವಿನ ಪತ್ರವ್ಯವಹಾರವನ್ನು ಉಲ್ಲೇಖಿಸಿ, ವಂದೇ ಮಾತರಂ ಮೇಲೆ ಕಾಂಗ್ರೆಸ್ ತುಷ್ಟೀಕರಣದ ರಾಜಕೀಯದಲ್ಲಿ ತೊಡಗಿದೆ ಎಂಬ ಪ್ರಧಾನಿ ಮೋದಿಯವರ ಆರೋಪವನ್ನು ತಳ್ಳಿಹಾಕಿದರು. ಬಂಕಿಮ ಚಂದ್ರ ಚಟರ್ಜಿ ಅವರು 1875 ರಲ್ಲಿ ಈ ಗೀತೆಯ ಮೊದಲ ಎರಡು ಚರಣಗಳನ್ನು ಬರೆದರು ಮತ್ತು 1882 ರಲ್ಲಿ ನಾಲ್ಕು ಚರಣಗಳನ್ನು ಸೇರಿಸಿ ಆನಂದ ಮಠದಲ್ಲಿ ಪ್ರಕಟಿಸಿದರು ಎಂದು ಅವರು ಹೇಳಿದರು.
1896 ರಲ್ಲಿ ಗುರುದೇವ ರವೀಂದ್ರನಾಥ ಠಾಗೋರ್ ಅವರು ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಹಾಡಿದರು. ವಂದೇ ಮಾತರಂನ ಮೊದಲ ಎರಡು ಚರಣಗಳನ್ನು ರಾಷ್ಟ್ರೀಯ ಗೀತೆಯನ್ನಾಗಿ ಮಾಡುವ ನಿರ್ಧಾರವನ್ನು ಪ್ರಶ್ನಿಸುವುದು ಸಂವಿಧಾನ ಸಭೆ ಮತ್ತು ಅದರ ಸದಸ್ಯರನ್ನು ಪ್ರಶ್ನಿಸುವಂತಿದೆ ಎಂದು ಕಿಡಿಕಾರಿದ ಪ್ರಿಯಾಂಕಾ ಗಾಂಧಿ, ಮೋದಿ ಜಿ ಸುಮಾರು 12 ವರ್ಷಗಳ ಕಾಲ ಪ್ರಧಾನಿಯಾಗಿದ್ದಾರೆ ಮತ್ತು ನೆಹರೂ ಅವರು ಅಷ್ಟೇ ವರ್ಷ ಜೈಲಿನಲ್ಲಿದ್ದರು" ಎಂದು ತಿಳಿಸಿದರು.
ನಂಬಿಕೆಗಳನ್ನು ಇತರರ ಮೇಲೆ ಹೇರುವ ಟೂಲ್:
ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದವರು ಈಗ "ವಂದೇ ಮಾತರಂ" ಮೌಲ್ಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ತಮ್ಮ ನಂಬಿಕೆಗಳನ್ನು ಇತರರ ಮೇಲೆ ಹೇರುವ ಸಾಧನವಾಗಿ ರಾಷ್ಟ್ರಗೀತೆಯನ್ನು ಬಳಸಬಾರದು ಎಂದು ಪ್ರತಿಪಾದಿಸಿದರು.
ವಂದೇ ಮಾತರಂ" ಅನ್ನು ಉತ್ಸಾಹದಿಂದ ಅನುಸರಿಸಬೇಕು, ಏಕೆಂದರೆ ಇದು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಜನರನ್ನು ಬೆಸೆದ ಗೀತೆಯಾಗಿದೆ. "ವಂದೇ ಮಾತರಂ ಪ್ರದರ್ಶಿಸಲು ಅಲ್ಲ, ರಾಜಕೀಯ ಸಾಧನವೂ ಅಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸದ ವ್ಯಕ್ತಿಗಳು "ವಂದೇ ಮಾತರಂ" ನ ಅರ್ಥವನ್ನು ಹೇಗೆ ಅರ್ಥಮಾಡಿಕೊಳ್ಳಬಲ್ಲರು ಎಂದು ಪ್ರಶ್ನಿಸಿದ್ದಾರೆ.
ಒಡಕು ಮೂಡಿಸಲು ವಂದೇ ಮಾತರಂ ಬಳಕೆ:
"ಇಂದು ಒಡಕು ಸೃಷ್ಟಿಸಲು ವಿಭಜಕ ಅಂಶಗಳು ವಂದೇ ಮಾತರಂ ಅನ್ನು ಬಳಸುತ್ತಿವೆ. ಈ ವ್ಯಕ್ತಿಗಳು ಬ್ರಿಟಿಷರು ಬಳಸಿದ ಅದೇ 'ಒಡೆದು ಆಳುವ' ನೀತಿಯನ್ನು ಅನುಸರಿಸುತ್ತಿದ್ದಾರೆ" ಎಂದು ಯಾದವ್ ಆರೋಪಿಸಿದರು.ಬ್ರಿಟಿಷ್ ಆಳ್ವಿಕೆಯಿಂದ ಹೊರಬರಲು ಭಾರತವನ್ನು ಒಗ್ಗೂಡಿಸುವಲ್ಲಿ "ವಂದೇ ಮಾತರಂ" ನಿರ್ಣಾಯಕ ಪಾತ್ರವನ್ನು ವಹಿಸಿದೆ ಮತ್ತು ಅದರ 150 ನೇ ವರ್ಷದಲ್ಲಿ, ಒಬ್ಬರ ನಂಬಿಕೆಗಳನ್ನು ಹೇರುವ ಅಥವಾ ಇತರರ ಮೇಲೆ ಒತ್ತಡ ಹೇರುವ ಸಾಧನವಾಗಿ ಈ ಹಾಡನ್ನು ಬಳಸಬಾರದು ಎಂದು ಅವರು ಒತ್ತಿ ಹೇಳಿದರು.