ಓಂ ಬಿರ್ಲಾಗೆ ವಿಪಕ್ಷ ಸಂಸದರ ಮನವಿ-ನ್ಯಾ.ಸ್ವಾಮಿನಾಥನ್ online desk
ದೇಶ

ದರ್ಗಾ ಬಳಿ ಸಾಂಪ್ರದಾಯಿಕ ದೀಪ ಬೆಳಗಲು ಆದೇಶ: ಮದ್ರಾಸ್ ಹೈಕೋರ್ಟ್ ಜಡ್ಜ್ ಪದಚ್ಯುತಿಗೆ ವಿಪಕ್ಷದ 120 ಸಂಸದರ ಸಹಿ; ಓಂ ಬಿರ್ಲಾಗೆ ದೂರು!

ಬೆಟ್ಟದ ಮೇಲಿನ ದರ್ಗಾ ಬಳಿ ಇರುವ ಕಲ್ಲಿನ ಕಂಬದ ಮೇಲೆ ಸಾಂಪ್ರದಾಯಿಕ ದೀಪ ಬೆಳಗಲು ಆದೇಶ ನೀಡಿರುವ ನ್ಯಾಯಾಧೀಶರನ್ನು ಪದಚ್ಯುತಗೊಳಿಸಬೇಕೆಂದು ಆಗ್ರಹಿಸಿ ಸ್ಪೀಕರ್ ಗೆ ದೂರು ನೀಡಿದ್ದಾರೆ.

ನವದೆಹಲಿ: ತಮಿಳುನಾಡಿನ ತಿರುಪರನಕುಂದ್ರಂ ಬೆಟ್ಟದಲ್ಲಿ ದರ್ಗಾದ ಬಳಿ ಇರುವ ಕಲ್ಲಿನ ಕಂಬದ ಮೇಲೆ ಸಾಂಪ್ರದಾಯಿಕ ದೀಪ ಬೆಳಗಲು ಅನುಮತಿ ನೀಡಿದ್ದ ನ್ಯಾಯಾಧೀಶ ಜಿ. ಆರ್ ಸ್ವಾಮಿನಾಥನ್ ವಿರುದ್ಧ ವಿಪಕ್ಷಗಳ ಸಂಸದರು ಕಿಡಿ ಕಾರಿದ್ದಾರೆ.

ಪ್ರಮುಖವಾಗಿ ತಮಿಳುನಾಡಿನ ಡಿಎಂಕೆ ಪಕ್ಷ ಜಡ್ಜ್ ವಿರುದ್ಧ ಸಮರ ಸಾರಿದ್ದು, ನ್ಯಾಯಾಧೀಶರ ಆದೇಶ, ಅವರ ನಡೆಗಳು ನ್ಯಾಯಾಂಗದ ಜಾತ್ಯಾತೀತ, ಪಾರದರ್ಶಕ, ತಾರತಮ್ಯ ಇಲ್ಲದ ಸ್ವಭಾವಗಳ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡುತ್ತಿದೆ ಎಂದು 120 ಸಂಸದರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ಅಷ್ಟೇ ಅಲ್ಲದೇ ಬೆಟ್ಟದ ಮೇಲಿನ ದರ್ಗಾ ಬಳಿ ಇರುವ ಕಲ್ಲಿನ ಕಂಬದ ಮೇಲೆ ಸಾಂಪ್ರದಾಯಿಕ ದೀಪ ಬೆಳಗಲು ಆದೇಶ ನೀಡಿರುವ ನ್ಯಾಯಾಧೀಶರನ್ನು ಪದಚ್ಯುತಗೊಳಿಸಬೇಕೆಂದು ಆಗ್ರಹಿಸಿ ಸ್ಪೀಕರ್ ಗೆ ದೂರು ನೀಡಿದ್ದಾರೆ.

ಆದೇಶವನ್ನು ವಿರೋಧಿಸಿರುವ ಡಿಎಂಕೆ, ಕಾಂಗ್ರೆಸ್, ಸಮಾಜವಾದಿ ಪಕ್ಷ ಸೇರಿದಂತೆ INDI ಮೈತ್ರಿಕೂಟದ ಸಂಸದರು ಜಡ್ಜ್ ವಿರುದ್ಧ ಮಹಾಭಿಯೋಗ (ವಿಚಾರಣೆಗೆ ಒಳಪಡಿಸಿ ಪದಚ್ಯುತಿಗೊಳಿಸುವ ಪ್ರಕ್ರಿಯೆ) ಕ್ಕೆ ಸಹಿ ಹಾಕಿ, ಈ ಪ್ರಕ್ರಿಯೆಯನ್ನು ಚಾಲು ಮಾಡುವುದಕ್ಕೆ ಅನುಮತಿ ನೀಡಬೇಕೆಂದು ಓಂ ಬಿರ್ಲಾಗೆ ಮನವಿ (ನೊಟೀಸ್) ಸಲ್ಲಿಸಿದ್ದಾರೆ.

ನ್ಯಾಯಾಧೀಶರು ಪ್ರಕರಣಗಳನ್ನು ನಿರ್ದಿಷ್ಟ ರಾಜಕೀಯ ತತ್ವ-ಸಿದ್ಧಾಂತಗಳ ಆಧಾರದಲ್ಲಿ ಸೆಕ್ಯುಲರ್ ತತ್ವಕ್ಕೆ ವಿರುದ್ಧವಾಗಿ ನಿರ್ಧರಿಸುತ್ತಿದ್ದಾರೆ ಎಂದು ನೊಟೀಸ್ ನಲ್ಲಿ ವಿಪಕ್ಷ ಸಂಸದರು ಆರೋಪಿಸಿದ್ದಾರೆ.

ನ್ಯಾಯಾಧೀಶರನ್ನು ಪದಚ್ಯುತಗೊಳಿಸುವ ನಿರ್ಣಯಕ್ಕೆ ಕನಿಷ್ಠ 100 ಸಂಸದರು ಬೆಂಬಲ ನೀಡಬೇಕಾಗುತ್ತದೆ, ಮತ್ತು ಈಗ ಬಿರ್ಲಾ ಅವರು ಪದಚ್ಯುತಿಗೆ ಮನವಿ ಸಲ್ಲಿಸಲು ಕಾರಣಗಳನ್ನು ಅಧ್ಯಯನ ಮಾಡುವುದು ಮತ್ತು ನೋಟಿಸ್ ಅನ್ನು ಅಂಗೀಕರಿಸುವ ಮೊದಲು ಸಹಿ ಮಾಡಿದವರನ್ನು ಪರಿಶೀಲಿಸುವುದು ಜವಾಬ್ದಾರಿ ಹೊಂದಿದ್ದಾರೆ.

ಇದಷ್ಟೇ ಅಲ್ಲದೇ ನ್ಯಾ. ಜಿಆರ್ ಸ್ವಾಮಿನಾಥನ್ ಅವರು ನಿರ್ದಿಷ್ಟ ಸಮುದಾಯದ ಹಿರಿಯ ಅಡ್ವೊಕೇಟ್ ಹಾಗೂ ವಕೀಲರುಗಳೆಡೆಗೆ ಅನುಚಿತ ಪಕ್ಷಪಾತ ತೋರುತ್ತಿದ್ದಾರೆ ಎಂಬ ಆರೋಪವನ್ನು ಮಾಡಲಾಗಿದೆ. ಪದಚ್ಯುತಿಗೊಳಿಸುವ (ಮಹಾಭಿಯೋಗ) ನೊಟೀಸ್ ಗೆ ಎನ್ ಸಿಪಿಯ ಸುಪ್ರಿಯಾ ಸುಳೆ, ಎಐಎಂಐಎಂ ನ ಅಸಾದುದ್ದೀನ್ ಒವೈಸಿ ಸಹ ಸಹಿ ಮಾಡಿದ್ದಾರೆ.

ದೇವಾಲಯ ಮತ್ತು ಹತ್ತಿರದ ದರ್ಗಾ ಹೊಂದಿರುವ ತಿರುಪರಂಕುಂದ್ರಂನಲ್ಲಿರುವ ಬೆಟ್ಟದ ಮೇಲೆ ಸಾಂಪ್ರದಾಯಿಕ ಕಾರ್ತಿಗೈ ದೀಪವನ್ನು ಬೆಳಗಿಸುವ ಬಗ್ಗೆ ನ್ಯಾ.ಜಿಆರ್ ಸ್ವಾಮಿನಾಥನ್ ಅವರು ಆದೇಶ ನೀಡಿದ್ದರು. ನ್ಯಾಯಾಧೀಶರ ಆದೇಶದ ಪ್ರಕಾರ ಡಿಸೆಂಬರ್ 4 ರೊಳಗೆ "ದೀಪಥೂನ್" ಕಂಬದ ಮೇಲೆ ದೀಪವನ್ನು ಬೆಳಗಿಸಬೇಕಿತ್ತು. ದೇವಾಲಯದ ಅಧಿಕಾರಿಗಳು ಮತ್ತು ದರ್ಗಾ ಆಡಳಿತ ಮಂಡಳಿಯ ಆಕ್ಷೇಪಣೆಗಳನ್ನು ಈ ತೀರ್ಪು ತಿರಸ್ಕರಿಸಿತು ಮತ್ತು ಇದು ಮುಸ್ಲಿಂ ಸಮುದಾಯದ ಧಾರ್ಮಿಕ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಪ್ರತಿಪಾದಿಸಿತು. ಭದ್ರತಾ ಸಿಬ್ಬಂದಿಯ ಬೆಂಗಾವಲಿನಲ್ಲಿರುವ ಭಕ್ತರ ಸಣ್ಣ ಗುಂಪಿಗೆ ಆಚರಣೆಯನ್ನು ನಡೆಸಲು ಅವಕಾಶ ನೀಡಬೇಕೆಂದು ನ್ಯಾಯಾಲಯವು ನಿರ್ದೇಶಿಸಿತ್ತು. ಆದಾಗ್ಯೂ, ಕಾನೂನು ಮತ್ತು ಸುವ್ಯವಸ್ಥೆಯ ಕಾಳಜಿಯನ್ನು ಉಲ್ಲೇಖಿಸಿ ರಾಜ್ಯ ಸರ್ಕಾರವು ತೀರ್ಪನ್ನು ಜಾರಿಗೆ ತರಲು ನಿರಾಕರಿಸಿತು. ಇದು ಹಿಂದೂ ಪರ ಗುಂಪುಗಳಿಂದ ಪ್ರತಿಭಟನೆಗಳಿಗೆ, ಪೊಲೀಸರೊಂದಿಗೆ ಘರ್ಷಣೆಗೆ ಕಾರಣವಾಯಿತು ಮತ್ತು ಈಗ ಅದು ಪ್ರಮುಖ ರಾಜಕೀಯ ಮತ್ತು ನ್ಯಾಯಾಂಗ ಸಂಘರ್ಷವಾಗಿ ಮಾರ್ಪಟ್ಟಿದೆ.

ನ್ಯಾಯಾಧೀಶರ ಆದೇಶವನ್ನು ವಿರೋಧಿಸಿ ಮಹಾಭಿಯೋಗಕ್ಕೆ ನೊಟೀಸ್ ನೀಡಿರುವ ಇಂಡಿ ಮೈತ್ರಿಕೂಟದ ನಡೆಯನ್ನು ತಮಿಳುನಾಡು ಬಿಜೆಪಿಯ ಮಾಜಿ ಅಧ್ಯಕ್ಷ ಅಣ್ಣಾಮಲೈ ತೀವ್ರವಾಗಿ ಖಂಡಿಸಿದ್ದು, ಇಂಡಿಯಾ ಬ್ಲಾಕ್ "ತಮ್ಮ ಹಿಂದೂ ವಿರೋಧಿ ರುಜುವಾತುಗಳನ್ನು ಹೆಮ್ಮೆಯ ಗುರುತಿನಂತೆ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಟ್ರಂಪ್ ಗೆ ಮೋದಿ ದೂರವಾಣಿ ಕರೆ: ಮಹತ್ವದ ಚರ್ಚೆ!

ಸಿಎಂ ಸಿದ್ದರಾಮಯ್ಯರ ವಿಮಾನ ಪ್ರಯಾಣ: 'ರಾಜ್ಯದ ಬೊಕ್ಕಸ'ದಿಂದ ಆದ ಖರ್ಚು ಎಷ್ಟು ಗೊತ್ತಾ?

ಪಶ್ಚಿಮ ಬಂಗಾಳ ಬಿಟ್ಟು ಇನ್ನುಳಿದ 6 ರಾಜ್ಯಗಳಿಗೆ SIR ಗಡುವು ವಿಸ್ತರಿಸಿದ ಚುನಾವಣಾ ಆಯೋಗ!

2ನೇ ಟಿ20: ಭಾರತಕ್ಕೆ 214 ಬೃಹತ್ ರನ್ ಗುರಿ ನೀಡಿದ ಆಫ್ರಿಕಾ

ದೆಹಲಿ ಗಲಭೆ ಆರೋಪಿ ಉಮರ್ ಖಾಲಿದ್‌ಗೆ ಷರತ್ತುಬದ್ಧ ಜಾಮೀನು!

SCROLL FOR NEXT